ಬಹುನಿರೀಕ್ಷಿತ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ನೀಡುವರೇ ನಿರ್ಮಲಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.30- ಸೋಮವಾರ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಖಾತೆ ಹೊಂದಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡುವರೆಂಬ ನಿರೀಕ್ಷೆ ಗರಿಗೆದರಿದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಯನ್ನು ಪ್ರವೇಶಿಸಿರುವುದರಿಂದ ರಾಜ್ಯದ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ ಸೋಮವಾರ ಮಂಡನೆಯಾಗಲಿರುವ ಬಜೆಟ್‍ನಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಮರುಚಾಲನೆ ಹಾಗೂ ರಾಜ್ಯಕ್ಕೆ ವಿಶೇಷ ಕೊಡುಗೆಗಳನ್ನು ಕೊಡಬಹುದೆಂದು ನಿರೀಕ್ಷಿಸಲಾಗಿದೆ.

ಆದರೆ ಈ ಬಾರಿ ಕೋವಿಡ್-19 ಆವರಿಸಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಏರುಪೇರಾಗಿದೆ. ಈ ನಡುವೆ ಲಾಕ್‍ಡೌನ್ ನಂತರ ನಿರೀಕ್ಷೆಗೂ ಮೀರಿ ಜಿಎಸ್‍ಟಿ ಸಂಗ್ರಹವಾಗಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನಿರ್ಮಲಾಸೀತಾರಾಮನ್ ತಮ್ಮ ಬಜೆಟ್‍ನಲ್ಲಿ ಒಂದಿಷ್ಟು ಕೊಡುಗೆಗಳನ್ನು ನೀಡಬಹುದೆಂದು ಎಲ್ಲರೂ ಎದುರು ನೋಡುತ್ತಿದ್ದಾರೆ.

ಕೊರೊನಾದಿಂದ ಆರ್ಥಿಕ ಮುಗ್ಗಟ್ಟು, ಜಿಎಸ್‍ಟಿ ಆದಾಯ ಕುಸಿತ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಕಚ್ಛಾತೈಲಗಳ ಬೆಲೆ ಏರಿಕೆ, ಉತ್ಪಾದನೆ ಕ್ಷೀಣ, ಉಪಭೋಗದ ಬೇಡಿಕೆ ಕ್ಷೀಣ, ನಿರುದ್ಯೋಗ ಸೇರಿ ಅನೇಕ ಸಮಸ್ಯೆಗಳಿಗೆ ಸಿಲುಕಿರುವ ನಡುವೆ ಫೆ.1ರಂದು ಮಂಡನೆಯಾಗುತ್ತಿರುವ 2021-22ರ ಬಜೆಟ್ ಮಹತ್ವ ಪಡೆದುಕೊಂಡಿದೆ.

ಪ್ರಸಕ್ತ ವರ್ಷ ರಾಜ್ಯದ ಹಂಚಿಕೆಯನ್ನು ಪರಿಷ್ಕರಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸಿರುವ ಕರ್ನಾಟಕ, ಕೇಂದ್ರ ಹಣಕಾಸು ಪ್ರಾಯೋಜಿತ ಯೋಜನೆಗಳಿಗೆ (ಸಿಎಸ್‍ಎಸ್) ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವಂತೆ ವಿತ್ತ ಸಚಿವರನ್ನು ಕೇಳಿಕೊಂಡಿದೆ.

15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಘೋಷಿಸಿದ 5,495 ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚುವರಿ ಅನುದಾನು ಕೊಡುವಂತೆಯೂ ಕೋರಿದೆ.

ಹೊಸ ಸಿಎಸ್‍ಎಸ್ ಯೋಜನೆ ಪರಿಚಯಿಸುವಾಗ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು. ಇಲ್ಲದಿದ್ದರೇ ರಾಜ್ಯ ಹಣಕಾಸಿನ ಮೇಲೆ ಹೊರೆ ಉಂಟಾಗಲಿದೆ. ಬಜೆಟ್‍ನಲ್ಲಿ ರೂಪಿಸಲಾದ ಯೋಜನಾ ವಿನಿಯೋಗದ ಪ್ರಕಾರ ಕೇಂದ್ರ ಸರ್ಕಾರವು ಸಿಎಸ್‍ಎಸ್ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ.

ಯೋಜನೆ ವಿನಿಯೋಗಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಉಂಟಾಗುತ್ತದೆ. ಹೀಗಾಗಿ ರಾಜ್ಯ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ. ಮೆಟ್ರೋ ರೈಲು, ಉಪನಗರ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಅನುದಾನ ನೀಡಬಹಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದೆ.

15ನೇ ಹಣಕಾಸು ಆಯೋಗದ ಶಿಫಾರಸುಗಳಡಿ ನೀಡಲಾಗುವ ವಿಶೇಷ ಅನುದಾನದ ಹೊರತಾಗಿ, ಇಲ್ಲಿಯವರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖರೀದಿ ಮಾಡಿದ್ದಕ್ಕೆ 885 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರವನ್ನು ಕೋರಿದೆ.

2020ರ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಕರ್ನಾಟಕ ಸರ್ಕಾರ ಸಲ್ಲಿಸಿದ 2,261 ಕೋಟಿ ರೂ. ಬೇಡಿಕೆಗೆ ಪ್ರತಿಯಾಗಿ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್‍ನಡಿ 1,369 ಕೋಟಿ ರೂ. ಬಿಡುಗೆ ಮಾಡಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವಾಣಿಜ್ಯ, ಪ್ರವಾಸ, ಹೋಟೆಲ್, ಸಂವಹನ ಸೇರಿದಂತೆ ಇತರೆ ಕೆಲವು ತೆರಿಗೆ ರಿಯಾಯಿತಿಗಳು ನೀಡುವಂತೆ ಕೋರಿದ್ದು, ಇದರಿಂದ ಉದ್ಯಮಿಗಳು ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ.

Facebook Comments

Sri Raghav

Admin