ಫೆ.1 ರಂದು ಕೇಂದ್ರ ಬಜೆಟ್, ರೈತರ ಅಭ್ಯುದಯಕ್ಕೆ ಆದ್ಯತೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.17- ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತರ ಬದುಕನ್ನು ಹಸನುಗೊಳಿಸಿ ಕೃಷಿ ಕ್ಷೇತ್ರದ ಸಮಗ್ರ ಬದಲಾವಣೆಗೆ ದೃಢ ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ ಫೆ.1ರ ಬಜೆಟ್‍ನಲ್ಲಿ ಈ ವಲಯಕ್ಕಾಗಿ ಮಹತ್ವದ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.  ಕೃಷಿ ಕ್ಷೇತ್ರದ ಅಮೂಲಾಗ್ರ ಬದಲಾವಣೆ, ರೈತರ ಆದಾಯ ದ್ವಿಗುಣ, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ, ವ್ಯವಸಾಯ ವಲಯದ ಸಮಗ್ರ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ರೈತಾಪಿ ವರ್ಗದ ಹಿತಾಸಕ್ತಿಗಾಗಿ ಮಹತ್ವದ ಯೋಜನೆಗಳು ಮತ್ತು ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆ ಇತ್ಯಾದಿ ಪ್ರಮುಖ ಅಂಶಗಳು ಬಜೆಟ್‍ನಲ್ಲಿ ಇರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ನೇಗಿಲ ಯೋಗಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಹ ರೂಪಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಅದರಲ್ಲಿನ ಕೆಲವು ಕಠಿಣ ನಿರ್ಬಂಧಗಳನ್ನು ಬದಲಿಸಿ ಕೃಷಿ ಕ್ಷೇತ್ರ ಮತ್ತು ರೈತಾಪಿ ವರ್ಗಕ್ಕೆ ಪೂರಕವಾಗುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಕೆಲ ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿರುವುದನ್ನು ಗಮನಿಸಿರುವ ಕೇಂದ್ರ ಕೃಷಿ ಸಚಿವಾಲಯ ರೈತರು ಮತ್ತು ಬೆಳೆಗಾರರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುವ ಅತ್ಯಂತ ಸರಳ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಕೃಷಿ ಸಚಿವಾಲಯ ಈಗಾಗಲೇ ವಿವಿಧ ರೈತ ಸಂಘಟನೆಗಳು ಮತ್ತು ಕೃಷಿ ಪರಿಣಿತರ ಸಲಹೆಗಳನ್ನು ಪಡೆದಿದ್ದು, ವ್ಯವಹಸಾಯ ವಲಯ ಮತ್ತು ರೈತಾಪಿಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ.  ಒಟ್ಟಾರೆ ಫೆ.1ರಂದು ಮಂಡನೆಯಾಗುವ ಬಜೆಟ್ ಆರ್ಥಿಕ ಪ್ರಗತಿ, ನಿರುದ್ಯೋಗ ನಿವಾರಣೆ, ಹಣದುಬ್ಬರ ನಿಯಂತ್ರಣ, ಬೆಲೆ ಏರಿಕೆಗೆ ಕಡಿವಾಣ ಇವುಗಳ ಜತೆಗೆ ಅನ್ನದಾತರ ಹಸನಗೊಳಿಸಲು ಕೃಷಿ ಕ್ಷೇತ್ರದ ಮಹತ್ವದ ಪರಿವರ್ತನೆಗೂ ಮುಂದಾಗಿದೆ.

Facebook Comments