Friday, March 29, 2024
Homeರಾಷ್ಟ್ರೀಯ25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ : ನಿರ್ಮಲಾ

25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ : ನಿರ್ಮಲಾ

ನವದೆಹಲಿ,ಫೆ.1- ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಹು ಆಯಾಮಗಳ ಬಡತನದಿಂದ ಹೊರಬರಲು ನೆರವು ನೀಡುವ ಮೂಲಕ ಕೇಂದ್ರ ಸರ್ಕಾರ ನೈಜ್ಯ ಬಡತನ ನಿರ್ಮೂಲನೆ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಂಸತ್‍ನಲ್ಲಿ ತಮ್ಮ 6 ನೇ ಬಜೆಟ್ ಮಂಡಿಸಿದ ಅವರು, ತಮ್ಮ ಸರ್ಕಾರದ 10 ವರ್ಷದ ಸಾಧನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಹಿಂದಿನ ಸರ್ಕಾರಗಳಂತೆ ನಾವು ಬರೀ ಘೋಷಣೆಗಳನ್ನು ಮಾಡುವುದಿಲ್ಲ. ಅಸಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಮಹಿಳಾ ಆದ್ಯತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ ನಿರ್ಮಲಾ ಸೀತಾರಾಮನ್ ಮಹಿಳಾ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ಪ್ರಸ್ತಾಪಿಸಿದರು. ಕಳೆದ 10 ವರ್ಷಗಳಿಂದಲೂ ಭಾರತ ಪ್ರಗತಿದಾಯಕ ಪರಿವರ್ತನೆ ಮುನ್ಸೂಚನೆಯನ್ನು ಕಂಡಿದೆ. ಅವಕಾಶಗಳಲ್ಲಿ ಭಾರತೀಯರು ಬಹುನಿರೀಕ್ಷೆಗಳನ್ನು ಹೊಂದಿದ್ದಾರೆ. ಜನರ ಆಶೀರ್ವಾದದೊಂದಿಗೆ ನಮ್ಮ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ 2014 ರಿಂದಲೂ ದೇಶದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದಿದ್ದಾರೆ.

ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಸಬ್ ಕ ಸಾಥ್, ಸಬ್ ಕ ವಿಕಾಸ್ ಎಂಬ ಮಂತ್ರದೊಂದಿಗೆ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಯುವ ಜನರ ಬಹು ಎತ್ತರದ ಆಕಾಂಕ್ಷೆಗಳಿಗೆ ಸ್ಪಂದಿಸಿದೆ. ಅವರ ಪ್ರಕಾಶಮಾನ ಭವಿಷ್ಯಕ್ಕಾಗಿ ಈ ಬಜೆಟ್ ಮಂಡಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದೊಂದಿಗೆ ಅತ್ಯುದ್ಭುತವಾದ ಕೆಲಸಗಳನ್ನು ಮುಂದುವರೆಸಲಿದೆ ಎಂಬ ವಿಶ್ವಾಸವನ್ನು ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ.

ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಳ್ಳುವಿಕೆಯ ಸಾಮಾಜಿಕ ಬದ್ಧತೆಯಾಗಿದೆ. ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಎಲ್ಲರ ಸಹಭಾಗಿತ್ವಕ್ಕೂ ಆದ್ಯತೆ ದೊರೆತಿದೆ ಎಂದು ಹೇಳಿದರು. ದೇಶದ ಭವಿಷ್ಯವಾಗಿರುವ ಅಮೃತ್‍ಕಾಲ್‍ಗೆ ಭದ್ರಬುನಾದಿ ಹಾಕಲಾಗಿದೆ. ಜನರ ಪರವಾದ ಕೆಲಸಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಉದ್ಯಮ ಹಾಗೂ ಕೈಗಾರಿಕಾ ವಲಯಕ್ಕೆ ನೀಡಿದ ಬೆಂಬಲದಿಂದಾಗಿ ಆರ್ಥಿಕ ಪರಿವರ್ತನೆ ಸಕಾರಾತ್ಮಕವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಎಲ್ಲರ ಮನೆಮನೆಗೆ ನೀರು, ಎಲ್ಲರಿಗೂ ಬ್ಯಾಂಕ್ ಖಾತೆಗಳು, ಉಚಿತ ಗ್ಯಾಸ್ ಕನೆಕ್ಷನ್, ಅಗತ್ಯ ಇರುವವರಿಗೆ ಆಹಾರ ಧಾನ್ಯ ಸೇರಿದಂತೆ ಜನಪರವಾದ ಯೋಜನೆಗಳು ನಿರಂತರವಾಗಿ ಜಾರಿಯಲ್ಲಿವೆ. ಸರ್ವಾಂಗೀಣ, ಸರ್ವಸ್ಪರ್ಶಿ, ಸರ್ವ ಸಮಾದೇಷ್ಟಿ ಆದ್ಯತೆಗಳೊಂದಿಗೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಭ್ರಷ್ಟಾಚಾರವನ್ನು ತಗ್ಗಿಸಲಾಗಿದ್ದು, ಪಕ್ಷಪಾತವನ್ನು ಹತ್ತಿಕ್ಕಲಾಗಿದೆ. ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ. ಸಂಪನ್ಮೂಲ ಹಂಚಿಕೆ ಸಮನಾಗಿ ನಡೆಯುತ್ತಿದೆ. ಸಮಾನತೆಗಾಗಿ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರ 4 ವರ್ಗಗಳ ಮೇಲೆ ಹೆಚ್ಚು ಆದ್ಯತೆ ನೀಡಿದೆ. ದಯಾಳ್, ಬಡವರು, ಮಹಿಳೆ, ಯುವಕರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇವರು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ. ಜಾತ್ಯತೀತತೆ ಎಂಬುದನ್ನು ಕ್ರಿಯಾತ್ಮಕವಾಗಿ ಜಾರಿಗೊಳಿಸಲಾಗಿದೆ. ಬಡವರ ಅಭಿವೃದ್ಧಿ, ದೇಶದ ಅಭಿವೃದ್ಧಿ. ಈ ಹಿಂದೆ ಗರೀಬ್ ಹಠಾವೊ ಘೋಷಣೆಯಾಗಿತ್ತು. ನಮ್ಮ ಸರ್ಕಾರದಲ್ಲಿ ಅವರು ಸಶಕ್ತಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ನೇರ ನಗದು ವರ್ಗಾವಣೆಯಡಿ ಪಿಎಂ ಜನಮನ್ ಖಾತೆ ಮೂಲಕ 34 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಇದರಿಂದ 2.7 ಲಕ್ಷ ಕೋಟಿ ರೂ. ಸೋರಿಕೆ ಉಳಿಕೆಯಾಗಿದೆ. ತನ್ಮೂಲಕ ಬಡವರ ಅಭಿವೃದ್ಧಿಗೆ ಮತ್ತಷ್ಟು ಹಣ ದೊರೆತಂತಾಗಿದೆ ಎಂದಿದ್ದಾರೆ. ಪಿಎಂ ಜನ್‍ಮನ್ ಯೋಜನೆಯಡಿ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅದರಲ್ಲಿ 2.3 ಲಕ್ಷ ಫಲಾನುಭವಿಗಳು 3ನೇ ಕಂತನ್ನು ಪಡೆದುಕೊಂಡಿದ್ದಾರೆ. 18 ವಲಯಗಳ ಕುಶಲಕರ್ಮಿಗಳನ್ನು ಬೆಂಬಲಿಸುವ ಪಿಎಂ ವಿಶ್ವಕರ್ಮ ಯೋಜನೆ ಉತ್ತಮ ಫಲಿತಾಂಶ ನೀಡಿದೆ. ಇದರಿಂದ ಹಲವು ವಲಯಗಳಲ್ಲಿ ಅದ್ಭುತವಾದ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ನೋಟು ಅಮಾನ್ಯೀಕರಣದಿಂದ ಖಾಸಗಿ ಬಂಡವಾಳದಾರರಿಗೆ ಲಾಭ : ಸುರ್ಜೇವಾಲ

ಅನ್ನದಾತರಾದ ರೈತರಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. 11.8 ಕೋಟಿ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವು ಒದಗಿಸಲಾಗುತ್ತದೆ. 4 ಕೋಟಿ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆ ಪಾವತಿಸಲಾಗಿದೆ. ಎಲೆಕ್ಟ್ರಾನಿಕ್ಸ್ ನ್ಯಾಷನಲ್ ಅಗ್ರಿಕಲ್ಚುರಲ್ ಮಾರ್ಕೆಟ್ ಸಮೀಕರಣದಿಂದ 1,361 ಮಂಡಿಗಳನ್ನು ಸಂಪರ್ಕಿಸಲಾಗಿದ್ದು, 1.8 ಕೋಟಿ ರೈತರಿಗೆ ಸೇವೆ ಒದಗಿಸುತ್ತಿದೆ. ಇದು 3 ಲಕ್ಷ ಕೋಟಿಗೂ ಅಕ ಇಳುವರಿಗೆ ಕಾರಣವಾಗಿದೆ ಎಂದರು. ಕೃಷಿ ಕ್ಷೇತ್ರದ ಸರ್ವರ ಒಳಗೊಳ್ಳುವಿಕೆ, ಸಮತೋಲನ, ತ್ವರಿತ ಅಭಿವೃದ್ಧಿ ಮತ್ತು ಉತ್ಪಾದಕತೆಗೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.

RELATED ARTICLES

Latest News