ಅನಂತ್ ಅಗಲಿಕೆಗೆ ರಾಷ್ಟ್ರಪತಿ ಸೇರಿ ಗಣ್ಯಾತಿಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

kovind--01

ನವದೆಹಲಿ, ನ.12-ಬಿಜೆಪಿ ಧುರೀಣ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ಧಾರೆ.  ಉತ್ತಮ ಸಂಸದೀಯ ಪಟು ಅನಂತಕುಮಾರ್ ಅವರ ನಿಧನದಿಂದ ನಮ್ಮ ದೇಶದ ಸಾರ್ವಜನಿಕ ಜೀವನಕ್ಕೆ, ಅದರಲ್ಲೂ ಕರ್ನಾಟಕದ ಜನತೆಗೆ ದುರಂತ ನಷ್ಟವಾಗಿದೆ ಎಂದು ರಾಷ್ಟ್ರಪತಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ವಿದ್ಯಾರ್ಥಿ ಚಳವಳಿಯಿಂದ ಸಂಸತ್ತಿನವರೆಗೆ ನಾನು ಅನೇಕ ವರ್ಷಗಳಿಂದ ಅವರೊಂದಿಗೆ ಇದ್ದೆ. ಅವರು ಅತ್ಯುತ್ತಮ ರಾಜಕೀಯ ಮುತ್ಸದ್ಧಿ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಬಣ್ಣಿಸಿದ್ಧಾರೆ.

ನನ್ನ ಅಚ್ಚುಮೆಚ್ಚಿನ ಸಹೋದ್ಯೋಗಿ ಮತ್ತು ಮಿತ್ರ ಅನಂತಕುಮಾರ್ ಅವರ ನಿಧನದಿಂದ ನನಗೆ ಅತೀವ ದು:ಖವಾಗಿದೆ. ಅವರು ಅಸಾಮಾನ್ಯ ನಾಯಕರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಅವರು ಪಾದಾರ್ಪಣೆ ಮಾಡಿದ್ದರು. ಸಮಾಜಕ್ಕೆ ಅವರು ಅತ್ಯಂತ ಶ್ರದ್ದೆ ಮತ್ತು ಬದ್ದತೆಯಿಂದ ಸೇವೆ ಸಲ್ಲಿಸಿದ್ದರು. ಅವರು ಉತ್ತಮ ಕಾರ್ಯಗಳು ಸ್ಮರಣೀಯ ಎಂದು ಮೋದಿ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷ ಸೋನಿಯಾಗಾಂಧಿ, ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಡಾ. ಮನಮೋಹನ್ ಸಿಂಗ್, ಕೇಂದ್ರದ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ಧುರೀಣರು, ಸಂಸದರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ಧಾರೆ.

ಕೇಂದ್ರ ಸಂಪುಟ ಸಂತಾಪ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟ ಹಿರಿಯ ನಾಯಕ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಮರ್ಪಿಸಿದೆ.

Facebook Comments