ದೀಪಾವಳಿಯ ವೇಳೆಗೆ ಕರೋನಾ ಕಂಟ್ರೋಲ್ ಆಗುತ್ತೆ : ಕೇಂದ್ರ ಸಚಿವ ಹರ್ಷವರ್ಧನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಆಗಸ್ಟ್‌ 30: ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಸಾಧಿಸುವ ಭರವಸೆಯನ್ನು ಹೊಂದಿದ್ದೇವೆ ಎಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕ ಪಿಡುಗನ್ನು ಇಡೀ ದೇಶದ ಜನಸಾಮಾನ್ಯರು, ನಾಯಕರು ಸಮರ್ಥ ನಾಯಕತ್ವ ವಹಿಸಿಕೊಂಡು ಹೇಗೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರು ಮತ್ತು ಇನ್ನೂ ಶಕ್ತಿಶಾಲಿಯಾಗಿ ಹೊರ ಬರಲಾಯಿತು ಎಂಬ ವಿಚಾರದ ಕುರಿತು ಅನಂತಕುಮಾರ್ ಪ್ರತಿಷ್ಠಾನ ಬೆಂಗಳೂರಿನಲ್ಲಿ ಆಯೋಜಿಸಿದ್ದ ದೇಶ ಮೊದಲು ವೆಬಿನಾರ್ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಿವಗಂತ ಅನಂತಕುಮಾರ್‌ ಅವರೊಂದಿಗಿನ ತಮ್ಮ ಒಡನಾಟವನ್ನು ಹಾಗೂ ದೇಶಕ್ಕೆ ಅವರ ಕೊಡುಗೆ ಹಾಗೂ ನಿಷ್ಠೆಯನ್ನು ಅವರು ಶ್ಲಾಘಿಸಿದರು. ಭಾರತ ದೇಶ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಬಹಳ ವ್ಯವಸ್ಥಿತವಾಗಿ ನಿಭಾಯಿಸುತ್ತಾ ಬಂದಿದೆ. 2020 ವರ್ಷದ ಜನವರಿ 30 ರಂದು ದೇಶದಲ್ಲಿ ಮೊದಲ ಕೊವಿಡ್‌ ಕೇಸ್‌ ಕೇರಳದಲ್ಲಿ ಪತ್ತೆಯಾಯಿತು.

ಇದಕ್ಕೂ ಮುನ್ನವೇ ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳು ಮೊದಲ ಸಭೆಯನ್ನು ಮಾಡಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ನೇತೃತ್ವದಲ್ಲಿ ಹಿರಿಯ ಮಂತ್ರಿಗಳು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಿದರು. ನಿನ್ನೆಯವರೆಗೆ ಈ ಸಮಿತಿಯ 22 ಸಭೆಯನ್ನು ನಡೆಸಲಾಗಿದೆ. ನಾವು ಎಲ್ಲಾ ಪರಿಸ್ಥಿತಿಯನ್ನು ಅವಲೋಕಿಸಿ ಮೊದಲೇ ಬೇಕಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಇದು ಸಹಾಯಕವಾಯಿತು.

ಫೆಬ್ರವರಿ ಮೊದಲ ವಾರದಲ್ಲಿ ಕೇವಲ ಪುಣೆಯಲ್ಲಿ 1 ಲ್ಯಾಬೋರೇಟರಿ ಇದ್ದದ್ದು ಇಂದು 1583 ಕ್ಕೆ ಹೆಚ್ಚಾಗಿದೆ. ಅದರಲ್ಲೂ 1000 ಕ್ಕೂ ಹೆಚ್ಚು ಸರಕಾರಿ ಲ್ಯಾಬೋರೇಟರಿಗಳನ್ನು ಸ್ಥಾಪಿಸಿದ್ದು ಗಮನಿಸಬೇಕಾದ ಸಂಗತಿ ಆಗಿದೆ. ಏಪ್ರಿಲ್‌ ಮೊದಲ ವಾರದಲ್ಲಿ ದೇಶದಲ್ಲಿ ಪ್ರತಿದಿನ ಕೇವಲ 6 ಸಾವಿರ ಪರೀಕ್ಷೆಗಳು ನಡೆಯುತ್ತಿದ್ದವು. ಇದೀಗ ಪ್ರತಿದಿನ ದೇಶದಲ್ಲಿ 1 ಮಿಲಿಯನ್‌ ಪರೀಕ್ಷೆಗಳನ್ನು ನಡೆಸುತ್ತಿದ್ದು, ಟಾರ್ಗೆಟ್‌ ದಿನಾಂಕಕ್ಕೂ ಮುನ್ನವೇ ಈ ಹಂತವನ್ನು ನಾವು ತಲುಪಿದ್ದೇವೆ ಎಂದರು.

ಕೋವಿಡ್‌ ಪ್ರಾರಂಭದ ಸಮಯದಲ್ಲಿ ಪಿಪಿಇ ಕಿಟ್‌ಗಳು, ಎನ್‌ 95 ಮಾಸ್ಕ್‌ಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಪ್ರಸ್ತುತ ದೇಶದಲ್ಲಿ ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್‌ ಉತ್ಪಾದನೆ ಮಾಡಲಾಗುತ್ತಿದೆ. ದೇಶದ 10 ಜನ ಉತ್ಪಾದಕರು ಎನ್‌ 95 ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ, 25 ಜನ ಉತ್ಪಾದಕರು ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಪಿಪಿಇ ಕಿಟ್‌ಗಳು, ಎನ್‌ 95 ಹಾಗೂ ವೆಂಟಿಲೇಟರ್‌ಗಳ ಕೊರತೆ ನೀಗಿದೆ ಎಂದು ಹೇಳಿದರು.

ಮೊದಲು ಕರೋನಾ ಟೆಸ್ಟ್‌ ಕಿಟ್‌ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ಅದರೆ ಇದೀಗ ದೇಶದಲ್ಲೇ ಅಂತಹ ಕಿಟ್‌ಗಳನ್ನು ನಾವು ಉತ್ಪಾದನೆ ನಡೆಯುತ್ತಿದ್ದು ಅದರ ದರವೂ ಕೂಡಾ ಬಹಳ ಕಡಿಮೆಯಾಗಿದೆ. 7 ಕರೋನಾ ವಾಕ್ಸಿನ್‌ ಟ್ರಯಲ್‌ಗಳು ನಡೆಯುತ್ತಿವೆ. ಅದರಲ್ಲಿ ಮೂರು ಕ್ಲಿನಿಕಲ್‌ ಟ್ರಯಲ್‌ ಗಳು ಹಾಗೂ 4 ಪ್ರಿ ಕ್ಲೀನಿಕಲ್‌ ಟ್ರಯಲ್‌ಗಳು ಹಂತದಲ್ಲಿವೆ.

ಈ ವರ್ಷದ ಕೊನೆಯಲ್ಲಿ ನಾವು ವ್ಯಾಕ್ಸಿನ್‌ ಬರುವ ಸಾಧ್ಯತೆ ಇದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕಾರಣದಿಂದಾಗಿ ನಾವು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಅಲ್ಲದೆ, ಇದಕ್ಕೆ ದೇಶದ ವೈಜ್ಞಾನಿಕ ಸಮುದಾಯ ಹಾಗೂ ಕರೋನಾ ವಾರಿಯರ್‌ ಗಳ ಕೊಡುಗೆ ಬಹಳಷ್ಟಿದೆ ಎಂದು ಶ್ಲಾಘಿಸಿದರು.

ದೇಶಕ್ಕೆ ಭೇಟಿ ನೀಡಿದ್ದ ಹಾರ್ವರ್ಡ್‌ ಹಾಗೂ ಪ್ರಮುಖ ಸಂಶೋಧನಾ ತಜ್ಞರು ಜೂನ್‌ ತಿಂಗಳಲ್ಲಿ 300 ಮಿಲಿಯನ್‌ ಗೂ ಹೆಚ್ಚು ರೋಗಿಗಳು ಹಾಗೂ 6 ಮಿಲಿಯನ್‌ ಸಾವು ಸಂಭವಿಸಲಿದೆ ಎಂದು ಹೇಳಿದ್ದರು. ಆದರೆ, ನಾವೀಗ ಆಗಸ್ಟ್‌ ತಿಂಗಳ ಕೊನೆಯಲ್ಲಿದ್ದು ಒಟ್ಟು ಕರೋನಾ ಕೇಸ್‌ ಗಳೂ 3.5 ಮಿಲಿಯನ್‌ ಅದರಲ್ಲಿ 2.7 ಮಿಲಿಯನ್‌ ರೋಗಿಗಳು ಈಗಾಗಲೇ ಹುಷಾರಾಗಿದ್ದಾರೆ.

ಇನ್ನುಳಿದವರು ರೋಗದಿಂದ ಗುಣಮುಖರಾಗುವ ಹಂತದಲ್ಲಿದ್ದಾರೆ. ವಿಶ್ವದ ಬೇರೆ ಯಾವುದೇ ದೇಶಕ್ಕಿಂತಲೂ ನಾವು ಕರೋನಾ ಸಾಂಕ್ರಾಮಿಕ ರೋಗವನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಿದ್ದು, ನಮ್ಮ ಮರಣ ಪ್ರಮಾಣ ಶೇಕಡಾ 1.8 ರಷ್ಟಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ನಮ್ಮ ದೇಶ ಈಗಾಗಲೇ ಕರೋನಾ ವೈರಸ್‌ ನಿಂದ ಹೋರಾಡುವುದನ್ನು ಹಾಗೂ ಅದರ ಜೊತೆ ಬದುಕಲು ಕಲಿತಿದೆ. ಪೊಲೀಯೋ, ಸ್ಮಾಲ್‌ ಫಾಕ್ಸ್‌ ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಹಾಗೂ ಎಬೋಲಾ ವೈರಸ್ಸ್‌ ನ್ನು ದೇಶಕ್ಕೆ ಕಾಲಿಡದಂತೆ ಹಾಗೂ ನಿಫಾ ವೈರಸನ್ನು ಕೇರಳ ರಾಜ್ಯದಲ್ಲೇ ನಿಭಾಯಿಸಿದಂತಹ ಭಾರತ ದೇಶ ಕರೋನಾ ವನ್ನು ಬಹಳ ಓಳ್ಳೆಯ ರೀತಿಯಲ್ಲಿ ನಿಭಾಯಿಸಲಿದೆ. ಈ ಹಿನ್ನಲೆಯಲ್ಲಿ ಮುಂಬರುವ ದೀಪಾವಳಿ ಹಬ್ಬದ ಹೊತ್ತಿಗೆ ಕರೋನಾ ಸಾಂಕ್ರಾಮಿಕ ರೋಗದ ಮೇಲೆ ನಿಯಂತ್ರಣ ಸಾಧಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದ ಉಪಮುಖ್ಯಮಂತ್ರಿ ಅಶ್ವತ್‌ನಾರಾಯಣ ಮಾತನಾಡಿ, ಕೋವಿಡ್‌ ಕಾರಣ ರಾಜ್ಯದ ಹಲವಾರು ಕ್ಷೇತ್ರಗಳು ತೊಂದರೆ ಅನುಭವಿಸಿವೆ. ಅವುಗಳನ್ನು ಸರಿದಾರಿಗೆ ತರುವ ಉದ್ದೇಶದಿಂದ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ನಾವು ಕೋವಿಡ್‌ ಪರಿಸ್ಥಿತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದೇವೆ.

ಭೂಸುಧಾರಣೆ, ಏಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ಹೊಸ ಕೈಗಾರಿಕಾ ನೀತಿ, ಕೈಗಾರಿಕಾ ಸೌಲಭ್ಯ ಕಾಯಿದೆ, ಬಂಡವಾಳ ಹೂಡಿಕೆಗೆ ನೀತಿ ನಿಯಮಗಳ ಸಡಲಿಕೆ ಹೀಗೆ ಹಲವಾರು ಕ್ರಮಗಳನ್ನು ಸರಕಾರ ಕೈಗೊಂಡಿದೆ. ಇಎಸ್‌ಡಿಎಂ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ತಂದಿರು ಕಾಯಿದೆ ಬಹಳ ಆಕರ್ಷಕವಾಗಿದೆ.

ರಾಜ್ಯದಲ್ಲಿ ಇರುವ ಕೌಶಲ್ಯಕ್ಕೆ ಒಳ್ಳೆಯ ಅವಕಾಶ ನೀಡುವ ಉದ್ದೇಶ ಹಾಗೂ ರಾಜ್ಯವನ್ನು ಉತ್ಪಾದನಾ ಹಬ್‌ ಆಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಹಾಗೂ ಸುಧಾರಣೆಯನ್ನು ಮಾಡುತ್ತಿದ್ದೇವೆ. ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿಯೂ ನಮ್ಮ ಸರಕಾರ ಕೈಗೊಂಡ ಕ್ರಮಗಳು ದೇಶಕ್ಕೆ ಮಾದರಿಯಾಗಿವೆ. ಸಿಇಟಿ ಪರೀಕ್ಷೆ ನಡೆಸಿದ್ದು ಬಹಳ ಪ್ರಶಂಸೆಗೆ ಕಾರಣವಾಗಿದೆ ಎಂದು ಹೇಳಿದರು.

ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಕರೋನಾ ಸಾಂಕ್ರಾಮಿಕ ರೋಗ ಬಹಳ ಪಾಠಗಳನ್ನು ಕಲಿಸಿದೆ. ರಾಜ್ಯ ಸರಕಾರ ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಬಹಳ ಒಳ್ಳೆಯ ಅಭಿವೃದ್ದಿಯನ್ನು ಮಾಡಿದೆ. ಏಪ್ರಿಲ್‌ ತಿಂಗಳಲ್ಲಿ ರಾಜ್ಯದಲ್ಲಿ 8 ರ ಸಂಖ್ಯೆಯಲ್ಲಿದ್ದ ಲ್ಯಾಬೋರೇಟರಿಗಳು ಇದೀಗ 110 ಕ್ಕೆ ಏರಿಕೆ ಆಗಿವೆ.

ಮಾರ್ಚ್‌ ನಿಂದ ಇದುವರೆಗೂ ಬಹಳಷ್ಟು ಬದಲಾವಣೆಗಳು ಆಗಿ ಖರ್ಚಿನ ವಿಷಯದಲ್ಲೂ ಕಡಿಮೆ ಆಗಿದೆ. ಕೊರತೆ ಕಂಡು ಬರುತ್ತಿದ್ದ ರೆಮಿಡಿಸಿವರ್‌ ಮಾತ್ರೆಯ ಉತ್ಪಾದನೆಯು ಹೆಚ್ಚಾಗಿದ್ದು, 1 ಲಕ್ಷ ಮಾತ್ರೆಗಳನ್ನು ರಾಜ್ಯಕ್ಕೆ ಖರೀದಿಸಿದ್ದೇವೆ. ರಾಜ್ಯದ ಆಸ್ಪತ್ರೆಗಳಿಗೆ ಬೇಕಾದ ಆಮ್ಲಜನಕ ಪೂರೈಕೆಯನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಟೆಸ್ಟ್‌ಗಳ ಸಂಖ್ಯೆಯನ್ನು ನಾವು ಹೆಚ್ಚಿಸಿದ್ದೇವೆ.

ಇದರಿಂದಾಗಿ ಸಂಖ್ಯೆ ಹೆಚ್ಚಾದಂತೆ ಕಾಣುತ್ತಿದೆ. ಲಕ್ಷಣ ಇಲ್ಲದ ರೋಗಿಗಳನ್ನು ಪತ್ತೆ ಹಚ್ಚುವ ಮೂಲಕ ಹೆಚ್ಚು ಜನರಿಗೆ ಇದು ಹರಡದಂತೆ ತಡೆಯುವುದು ನಮ್ಮ ಉದ್ದೇಶವಾಗಿದೆ. ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ರಾಜ್ಯದಲ್ಲಿ ಸಂಖ್ಯೆ ಏರಿಕೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ನಾರಾಯಣ ಹೆಲ್ತ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ದೇವಿ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ದೇಶದ ಆರೋಗ್ಯ ವ್ಯವಸ್ಥೆಯ ನೀತಿ ನಿಯಮಗಳನ್ನು ಕೈಗೊಂಡಿರುವ ಬದಲಾವಣೆಗಳಿಂದ ಎಲ್ಲಾ ಸಮುದಾಯದ ಜನರಿಗೂ ಸುಲಭವಾಗಿ ಆರೋಗ್ಯ ವ್ಯವಸ್ಥೆ ದೊರೆಯಲಿದೆ ಎಂದು ಹೇಳಿದರು.

ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿ ಆಗಿರುವ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಪ್ರತಿಷ್ಠಾನವು ಅನಂತಕುಮಾರ್ ರಾಷ್ಟ್ರೀಯ ನಾಯಕತ್ವ ಮತ್ತು ನೀತಿ ನಿರೂಪಣೆ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಇದರಲ್ಲಿ ನಾಯಕತ್ವ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು ಸಂಶೋಧನೆಯನ್ನು ಕೈಗೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಿದೆ. ಉದ್ದೇಶಿತ ಸಂಸ್ಥೆಯ ಆರಂಭಕ್ಕೆ ಪೂರಕವಾಗಿ ವೆಬಿನಾರ್ ಸಂವಾದಗಳ ಸರಣಿಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಮತ್ತು ನಾಯಕತ್ವ ತರಬೇತುದಾರರಾದ ಡಾ.ಬಾಲಸುಬ್ರಮಣ್ಯಂ ಹಾಗೂ ಹಲವಾರು ರಾಜಕಾರಣಿಗಳು “ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿನ ನಾಯಕತ್ವ’’ದ ಬಗ್ಗೆ ವಿವರವಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಎಸ್.ಶ್ರೀನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Facebook Comments

Sri Raghav

Admin