ಕೇಂದ್ರದ ಆನ್ ಲಾಕ್‍ಡೌನ್ 2.0 ಮಾರ್ಗಸೂಚಿಗಿಂತ ರಾಜ್ಯದಲ್ಲಿ ಕಠಿಣ ನಿಮಯ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1-ಆನ್ ಲಾಕ್‍ಡೌನ್ 2.0 ಅಂಗವಾಗಿ ಕೇಂದ್ರ ಸರ್ಕಾರ ಇಂದಿನಿಂದ ಕಫ್ರ್ಯೂ ಸಮಯದ ಮಿತಿಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಗದಿಪಡಿಸಿದೆ. ಆದರೆ ಕರ್ನಾಟಕದಲ್ಲಿ ಎರಡು ಗಂಟೆ ಮುಂಚಿತವಾಗಿಯೇ ಆರಂಭವಾಗಲಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯಿಂದಾಗಿ ರಾತ್ರಿ ಕಫ್ರ್ಯೂ ಹೇರಿರುವ ಸರ್ಕಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಿದೆ, ಜೊತೆಗೆ ಭಾನುವಾರದ ಲಾಕ್‍ಡೌನ್ ಆಗಸ್ಟ್ 2ರವರೆಗೆ ಮುಂದುವರಿಸಲು ನಿರ್ಧರಿಸಿದೆ.

ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾಜ್ಯದಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳ ಜೊತೆಗೆ ಅನೇಕ ಪಾಳಿಯಲ್ಲಿ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುವುದು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕುಗಳ ಸಾಗಣೆ, ಪ್ರಮುಖ ಜಿಲ್ಲಾ ರಸ್ತೆಗಳು, ಸರಕುಗಳನ್ನು ಲೋಡ್ ಮಾಡುವುದು,

ಅನ್‍ಲೋಡ್ ಮತ್ತು ಬಸ್ಸುಗಳು, ರೈಲು, ವಿಮಾನಗಳಿಂದ ಇಳಿದ ನಂತರ ಅವರ ಸ್ಥಳಗಳಿಗೆ ವ್ಯಕ್ತಿಗಳ ಪ್ರಯಾಣಕ್ಕೆ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಮೊದಲೇ ನಿರ್ಧರಿತ ಮದುವೆ ಕಾರ್ಯಕ್ರಮಗಳಿಗೆ ಭಾನುವಾರದ ಕಫ್ರ್ಯೂನಿಂದ ವಿನಾಯಿತಿ ನೀಡಲಾಗಿದೆ. ಜುಲೈ 10ರಿಂದ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಚೇರಿಗಳ ನೌಕರರಿಗೆ ಒಂದು ತಿಂಗಳ ಕಾಲ ಎಲ್ಲ ಶನಿವಾರ ರಜೆ ನೀಡಿ, ವಾರದ ಕೆಲಸದ ದಿನಗಳನ್ನು ಐದು ದಿನಗಳಿಗೆ ಇಳಿಸಲಾಗಿದೆ.

ಕೇಂದ್ರದ ನಿರ್ದೇಶನಗಳನ್ನು ಅನುಸರಿಸಿ, ಕರ್ನಾಟಕವು ಆನ್‍ಲೈನ್ ಮತ್ತು ದೂರಶಿಕ್ಷಣ ತರಗತಿಗಳನ್ನು ಹೊರತುಪಡಿಸಿ, ಮೆಟ್ರೋ ರೈಲು, ಸಿನೆಮಾ ಹಾಲ್, ಜಿಮ್ನಾಷಿಯಂ, ಈಜುಕೊಳ, ಮನರಂಜನಾ ಉದ್ಯಾನವನ, ಸಭಾಂಗಣ, ಚಿತ್ರಮಂದಿರ, ಬಾರ್, ಶಾಲಾಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ಆದೇಶ ಹೊರಡಿಸಿದೆ.

ಸಭಾಂಗಣಗಳು ಸಾಮಾಜಿಕ, ರಾಜಕೀಯ, ಧಾರ್ಮಿಕ, ಮನರಂಜನೆ, ಕ್ರೀಡೆ ಅಥವಾ ಯಾವುದೇ ದೊಡ್ಡ ಮಟ್ಟದ ಕ್ರೀಡಾ ಕೂಟಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ತರಬೇತಿ ಸಂಸ್ಥೆಗಳಿಗೆ ನಿರ್ದಿಷ್ಟ ಎಸ್‍ಒಪಿ (ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು) ಯೊಂದಿಗೆ ಜುಲೈ 15ರ ನಂತರ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ.

ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್‍ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಮತ್ತು ಜನರ ತುರ್ತುಸ್ಥಿತಿಯನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಅಥವಾ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅನುಮತಿಸಲಾಗುತ್ತದೆ. ಅಂತಾರಾಜ್ಯ ಪ್ರಯಾಣಕ್ಕೆ ಪಾಸ್‍ಗಳು ಅಥವಾ ಅನುಮತಿಗಳನ್ನು ಪಡೆದುಕೊಳ್ಳಲು ಯಾವುದೇ ನಿರ್ಬಂಧಗಳು ಅಥವಾ ಅವಶ್ಯಕತೆಗಳಿಲ್ಲ.

ಆದರೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸೇವಾ ಸಿಂಧು ಪೋರ್ಟಲ್ ನೋಂದಣಿ ಮತ್ತು ಕ್ವಾರಂಟೈನ್ ಮಾನದಂಡಗಳು ಕಡ್ಡಾಯವಾಗಿ ಮುಂದುವರೆಯಲಿದೆ. ಕೆಲವು ನಿರ್ಬಂಧಗಳೊಂದಿಗೆ ಶ್ರಮಿಕ್ ರೈಲುಗಳ ಸಂಚಾರ ಮತ್ತು ನಿಯಮಿತ ಸಾರಿಗೆ ಸಂಚಾರ ಮುಂದುವರಿಯಲಿವೆ.

Facebook Comments