ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಡಿ.5- ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಐವರು ದುಷ್ಕರ್ಮಿಗಳು ಇಂದು ಬೆಳಗ್ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ತೀವ್ರ ಸುಟ್ಟ ಗಾಯಗಳಾಗಿರುವ ಸಂತ್ರಸ್ತೆಯನ್ನು ಲಕ್ನೋದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಆಕೆಯ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಿಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಧುಪುರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ದುಷ್ಕರ್ಮಿಯೂ ಸೇರಿದಂತೆ ಐವರು ಅತ್ಯಾಚಾರ ಸಂತ್ರಸ್ತೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ತೀವ್ರ ಗಾಯಕ್ಕೊಳಗಾದ ಆಕೆಯನ್ನು ತಕ್ಷಣ ಲಕ್ನೋದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ಮಾರ್ಚ್‍ನಲ್ಲಿ ಈಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸಂತ್ರಸ್ತೆ ಐವರ ಹೆಸರನ್ನು ತಿಳಿಸಿದ್ದರು. ಇಬ್ಬರನ್ನು ಬಂಧಿಸಲಾಗಿತ್ತು. ನಂತರ ಆರೋಪಿಗಳು ಜಾಮೀನು ಪಡೆದಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರೆದಿದ್ದು , ಸಾಕ್ಷ್ಯಾಧಾರ ನಾಶಪಡಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಹಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Facebook Comments