ಅವೈಜ್ಞಾನಿಕ ಟೋಲ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ಹೆದ್ದಾರಿಗಳಲ್ಲಿ ಸಂಗ್ರಹಿಸಲಾಗುತ್ತಿರುವ ಅವೈಜ್ಞಾನಿಕ ಟೋಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯರು ಚರ್ಚೆಗೆ ಹೆಚ್ಚಿನ ಸಮಯ ಕೇಳಿದರು. ಪ್ರಶ್ನೋತ್ತರದ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಮಹಂತೇಶ್ ಕವಟಗಿ ಮಠ ಅವರು ರಂಗನಹಳ್ಳಿ ಯಿಂದ ಬೆಳಗಾವಿವರೆಗೆ 73 ಕ.ಮೀ ರಸ್ತೆಯಲ್ಲಿ 2003 ಟೋಲ್‍ಗಳನ್ನು ಹಾಕಿ 2007ರಿಂದ ಹಣ ಸಂಗ್ರಹಿಸಲಾಗುತ್ತಿದೆ. ಈವರೆಗೂ ಹಿರೇಬಾಗೇವಾಡಿಯಲ್ಲಿ 258 ಹತ್ತರಗಿಯಲ್ಲಿ 273 ಕೂಗನಹಳ್ಳಿ ಟೋಲ್ 514 ಕೋಟಿ ರೂ. ಸೇರಿ 1,000 ಕೋಟಿಗೂ ಹೆಚ್ಚಿನ ಟೋಲ್ ಸಂಗ್ರಹವಾಗಿದೆ.

ಈ ರಸ್ತೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು , ಇನ್ನು ಎಷ್ಟು ವರ್ಷ ಟೋಲ್ ಸಂಗ್ರಹಿಸಲು ಅವರಿಗೆ ಅವಕಾಶ ನೀಡುತ್ತೀರಾ ಎಂದರು.ಅದಕ್ಕೆ ಉತ್ತರಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರು ಇದು ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ತೆಗೆದುಕೊಳ್ಳಲಾಗಿದೆ. ರಸ್ತೆ ನಿರ್ಮಿಸಲು ಖಾಸಗಿ ಸಂಸ್ಥೆಗಳು, ಬ್ಯಾಂಕ್‍ಗಳಿಂದ ಸಾಲ ಪಡೆದಿರುತ್ತವೆ. ಅದು ತೀರುವವರೆಗೂ ಶುಲ್ಕ ಸಂಗ್ರಹಿಸಲಾಗುತ್ತದೆ. ಕೆಲವು ರಸ್ತೆಗಳಲ್ಲಿ 10 ವರ್ಷ, 20 , 30 ವರ್ಷಗಳವರೆಗೂ ಶುಲ್ಕ ಸಂಗ್ರಹಿಸಲು ಅನುಮತಿ ನೀಡಲಾಗಿದೆ ಎಂದರು.

ಬೆಳಗಾವಿ, ಮುಧೋಳ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕಬ್ಬು ಅರೆಯುವ ಸಂದರ್ಭದಲ್ಲಿ ಸುಮಾರು 4 ತಿಂಗಳು ತೊಂದರೆಯಾಗುತ್ತಿರುವುದು ನಿಜ. ಕಬ್ಬು ಸಾಗಿಸುವ ಟ್ರ್ಯಾಕ್ಟರ್‍ಗಳು, ಟೋಲ್‍ಗಳಲ್ಲಿ ಸಾಲುಗಟ್ಟಿ ನಿಂತಿರುತ್ತವೆ. ಅವುಗಳಿಗೆ ಬೈ ಪಾಸ್ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಉಪ ಪ್ರಶ್ನೆಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಇದೊಂದು ಗಂಭೀರ ವಿಷಯ. ಸದಸ್ಯರು ಮಹತ್ವದ ವಿಷಯವನ್ನಾಗಿ ಪ್ರಸ್ತಾಪಿಸುತ್ತಿದ್ದು, ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರ ಬೇರೆ ರೀತಿ ಇದೆ. ಖಾಸಗಿ ಕಂಪೆನಿಗಳಿಗೆ ಇನ್ನು ಎಷ್ಟು ವರ್ಷ. ಟೋಲ್ ಸಂಗ್ರಹ ಮಾಡಲು ಅವಕಾಶ ನೀಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

ಈ ವಿಷಯದ ಚರ್ಚೆಗೆ ಅರ್ಧ ಗಂಟೆ ಕಾಲಾವಕಾಶ ನೀಡಲು ಮನವಿ ಮಾಡಿದರು. ಈ ಹಂತದಲ್ಲಿ ಪ್ರಕಾಶ್ ರಾಥೋಡ್, ಎಂ.ನಾರಾಯಣಸ್ವಾಮಿ ಸೇರಿದಂತೆ ಅನೇಕರು ಮಧ್ಯಪ್ರವೇಶಿಸಿ ಟೋಲ್ ಸಂಗ್ರಹದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಚರ್ಚಿಸಲು ಕಾಲಾವಕಾಶ ನೀಡಲು ಮನವಿ ಮಾಡಿದರು.
ಸದಸ್ಯರು ಪ್ರತ್ಯೇಕ ಸೂಚನಾ ಪತ್ರ ನೀಡಿದರೆ ಸಾರ್ವಜನಿಕರ ಮಹತ್ವದ ವಿಷಯವಾಗಿ ಚರ್ಚಿಸಲು ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದರು.

Facebook Comments