ಯುಪಿ ಸಿಎಂ ಯೋಗಿಗೆ ಪಿತೃ ವಿಯೋಗ, ಅಂತ್ಯ ಕ್ರಿಯೆಗೆ ಹೋಗಲ್ಲ ಎಂದ ಆದಿತ್ಯನಾಥ್
ನವದೆಹಲಿ, ಏ.20- ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಂದೆ ಆನಂದ ಸಿಂಗ್ ಬಿಶಿ ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಾ.15ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ತೀವ್ರ ನಿಗಾ ವಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 10.44ರಲ್ಲಿ ಅವರು ಕೊನೆಯುಸಿರೆಳೆದರು.
ಯೋಗಿ ಆದಿತ್ಯನಾಥ ಅವರ ತಂದೆ ಆನಂದಸಿಂಗ್ ಬಿಶಿ ನಿಧನರಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯುವಂತಾಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಯೋಗಿ ಆದಿತ್ಯನಾಥ್ ಅವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
# ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ :
ಕೊರೊನಾ ಅಟ್ಟಹಾಸದ ಈ ಸಂದರ್ಭದಲ್ಲಿ ನಿಯಮ ಪಾಲನೆ ಈಗ ಮಹತ್ವದ್ದಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಮಂಗಳವಾರ ಆನಂದ್ ಸಿಂಗ್ ಬಿಶ್ತ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಅಂತ್ಯ ಸಂಸ್ಕಾರದ ವಿಧಿಯಲ್ಲಿ ನಾನು ಪಾಲ್ಗೊಂಡರೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಪಾಲ್ಗೊಳ್ಳುತವುದು ಸೂಕ್ತವಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಈಗಾಗಲೇ ರಾಜ್ಯದ 15 ಜಿಲ್ಲೆಗಳನ್ನು ಡೇಂಜರಸ್ ಎಂದು ಗುರುತಿಸಲಾಗಿದೆ.