ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದವನಿಗೆ ಗಲ್ಲುಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಏ.3- ಅಪ್ರಾಪ್ತೆ ಮೇಲೆ ಅತ್ಯಾಚಾರ ವೆಸಗಿದ್ದ ಕಾಮುಕನಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ನೀರಜ್(30) ಮರಣದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿ. ಸೆಪ್ಟೆಂಬರ್ 10ರಂದು ಬಾಲಕಿ ತನ್ನ ತಂದೆಯೊಂದಿಗೆ ಫೀರೋಜ್‍ದಾಬಾದ್‍ನ ಜಸ್ರನಾದಲ್ಲಿರುವ ಭಂಡಾರದಲ್ಲಿ ಪ್ರಸಾದ ತೆಗೆದುಕೊಳ್ಳಲು ಹೋಗಿದ್ದಳು. ಬಳಿಕ ಪರಿಚಸ್ಥನೇ ಆಗಿದ್ದ ನೀರಜ್ ಬಾಲಕಿಯನ್ನು ತಾನೇ ಮನೆಗೆ ಬಿಡುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿದ ತಂದೆ ಆತನೊಂದಿಗೆ ಮಗಳನ್ನು ಕಳುಹಿಸಿಕೊಟ್ಟಿದ್ದರು.

ಆದರೆ ಕಾಮುಕ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗದೆ ಬೇರೆಲ್ಲೊ ಹೊತ್ತೊಯ್ದು ಅತ್ಯಾಚಾರವೆಸಗಿದ್ದ. ವಿಷಯ ಬಾಲಕಿಯ ಮನೆಯವರ ಗಮನಕ್ಕೆ ಬಂದು ನೀರಜನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದರು. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸರ್ಕಾರಿ ವಕೀಲರೊಬ್ಬರು ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು.

ಸಾಕ್ಷ್ಯಾಧಾರಗಳು ಮತ್ತು ಬಾಲಕಿಯ ಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಲಯ ನೀರಜ್‍ಗೆ ಪೋ ಕ್ಸೊ ನಿಯಮಗಳ ಪ್ರಕಾರ ಮರಣದಂಡನೆ ವಿಧಿಸಿದೆ.

Facebook Comments