ಡಿವೈಎಸ್‌ಪಿ ಸೇರಿ 8 ಪೊಲೀಸರನ್ನು ಗುಂಡಿಟ್ಟು ಹತ್ಯೆ ಮಾಡಿದ ಕ್ರಿಮಿನಲ್ಸ್ .!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಜು.3- ಕೊಲೆ, ದರೋಡೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಕುಪ್ರಸಿದ್ಧ ಅಪರಾಧಿಯನ್ನು ಸೆರೆ ಹಿಡಿಯಲು ಹೋದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ), ಮೂವರು ಸಬ್ ಇನ್ಸ್‍ಪೆಕ್ಟರ್‍ಗಳೂ ಸೇರಿದಂತೆ ಎಂಟು ಪೊಲೀಸರನ್ನು ಕ್ರಿಮಿನಲ್‍ಗಳು ಗುಂಡಿಟ್ಟು ಕೊಂದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡದಿದೆ.

ಈ ಭೀಕರ ಎನ್‍ಕೌಂಟರ್‍ನಲ್ಲಿ ಏಳು ಪೊಲೀಸರಿಗೆ ತೀವ್ರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನ್ಪುರದಲ್ಲೇ ಮುಂಜಾನೆ ನಡೆದ ಮತ್ತೊಂದು ಎನ್‍ಕೌಂಟರ್‍ನಲ್ಲಿ ಇಬ್ಬರು ಕುಖ್ಯಾತ ಕ್ರಿಮಿನಲ್‍ಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರಿಗೂ ತೀವ್ರ ಗಾಯಗಳಾಗಿವೆ.

# 8 ಪೊಲೀಸರು ಹುತಾತ್ಮ :
ಕಾನ್ಪುರ ಜಿಲ್ಲೆಯ ಚೌಬೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಕ್ರು ಗ್ರಾಮದಲ್ಲಿ ಕುಪ್ರಸ್ಥಿದ್ಧ ಪಾತಕಿ ವಿಕಾಸ್ ದುಬೇ ಎಂಬಾತನನ್ನು ಬಂಧಿಸಲು ಪೊಲೀಸ್ ತಂಡ ಮಧ್ಯರಾತ್ರಿ ಕ್ರಿಮಿನಲ್‍ಗಳ ಅಡುಗುತಾಣವನ್ನು ಸುತ್ತಿವರಿದಿತ್ತು.

ಪೊಲೀಸರ ದಾಳಿ ಸುಳಿವು ತಿಳಿದ ಕ್ರಿಮಿನಲ್‍ಗಳು ಕಟ್ಟಡದ ತಾರಸಿಯಿಂದ ಗುಂಡಿನ ಸುರಿಮಳೆಗರೆದು, ಡಿವೈಎಸ್ಪಿ, ಮೂವರು ಎಸ್‍ಐಗಳು ಮತ್ತು ನಾಲ್ವರು ಕಾನ್ಸ್‍ಟೆಬಲ್‍ಗಳನ್ನು ಹತ್ಯೆ ಮಾಡಿದ್ದಾರೆ.

ಈ ಭೀಕರ ದಾಳಿ ಮತ್ತು ಎನ್‍ಕೌಂಟರ್‍ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ದೇವೇಂದ್ರ ಕುಮಾರ್ ಮಿಶ್ರಾ, ಸಬ್ ಇನ್ಸ್‍ಪೆಕ್ಟರ್‍ಗಳಾದ ಮಹೇಶ್ ಯಾದವ್, ಅನೂಪ್ ಕುಮಾರ್ (ಚೌಕಿ ಉಸ್ತುವಾರಿ) ಮತ್ತು ನೆಬುಲಾಲ್ ಹಾಗೂ ಪೇದೆಗಳಾದ ಸುಲ್ತಾನ್ ಸಿಂಗ್, ರಾಹುಲ್ ಜಿತೇಂದ್ರ, ಮತ್ತು ಬಬ್ಲು ಹುತಾತ್ಮರಾಗಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಎಚ್.ಸಿ.ಅಶ್ವಥಿ ತಿಳಿಸಿದ್ದಾರೆ.

ಎನ್‍ಕೌಂಟರ್ ವೇಳೆ ಇನ್ನೂ ಏಳು ಪೊಲೀಸರಿಗೆ ತೀವ್ರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ. ಪೊಲೀಸರು ತನ್ನನ್ನು ಬಂಧಿಸಲು ಬರುವ ಬಗ್ಗೆ ಮುನ್ನವೇ ಸುಳಿವು ತಿಳಿದ ದುಬೇ ಮತ್ತು ಆತನ ಕ್ರಿಮಿನಲ್ ಪಡೆ ಕಟ್ಟಡಗಳ ಮೇಲೆ ಅವಿತಿಟ್ಟುಕೊಂಡು ದಾಳಿ ನಡೆಸಿದೆ. ಪೊಲೀಸರು ಬರುವುದನ್ನು ತಡೆಗಟ್ಟಲು ರಸ್ತೆಗೆ ಅಡ್ಡಲಾಗಿ ಬುಲ್ಡೋಜರ್‍ಗಳನ್ನು ಕ್ರಿಮಿನಲ್‍ಗಳು ಇರಿಸಿದ್ದರು ಎಂದು ಡಿಜಿಪಿ ಅಶ್ವಥಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ), ಪೊಲೀಸ್ ಮಹಾ ನಿರೀಕ್ಷಕ (ಕಾನ್ಪುರ), ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ) ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.  ವಿಧಿ-ವಿಜ್ಞಾನ ಪ್ರಯೋಗಾಲಯ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದೆ.

ಪೊಲೀಸರ ಮಾರಣಹೋಮ ನಡೆಸಿ ಪರಾರಿಯಾಗಿರುವ ದುಬೇ ಮತ್ತು ಆತನ ಕ್ರಿಮಿನಲ್ ಗ್ಯಾಂಗ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತೀವ್ರ ಶೋಧ ಮುಂದುವರಿದಿದೆ. ಹಂತಕರ ಸೆರೆಗಾಗಿ ವಿಶೇಷ ಕಾರ್ಯಪಡೆ (ಎಸ್‍ಟಿಎಫ್)ಯನ್ನೂ ಸಹ ಬಳಸಲಾಗಿದೆ.

ವಿಕಾಸ್ ದುಬೇ ಕುಖ್ಯಾತ ಕ್ರಿಮಿನಲ್ ಆಗಿದ್ದು, ಕೊಲೆ, ಸುಲಿಗೆ, ದರೋಡೆ ಸೇರಿದಂತೆ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ. 2001ರಲ್ಲಿ ಪೆಪೊಲೀಸ್ ಠಾಣೆ ಒಳಗೇ ಬಿಜೆಪಿ ನಾಯಕ ಸಂತೋಷ್ ಶುಕ್ಲ ಅವರನ್ನು ದುಬೇ ಕೊಂದಿದ್ದ.

ಗಣ್ಯರ ಶ್ರದ್ಧಾಂಜಲಿ: ಕ್ರಿಮಿನಲ್‍ಗಳ ದಾಳಿಯಲ್ಲಿ ಎಂಟು ಪೊಲೀಸರು ಹತರಾದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಗಣ್ಯರು ತೀವ್ರವಾಗಿ ಖಂಡಿಸಿದ್ದಾರೆ.

ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಯೋಗಿ ಆದಿತ್ಯನಾಥ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವರದಿಯನ್ನು ಕೇಳಿದ್ದಾರೆ. ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಯೋಗಿ ಅದೇಶಿಸಿದ್ದಾರೆ.

# ಮತ್ತೊಂದು ಎನ್‍ಕೌಂಟರ್ : ಇಬ್ಬರು ಕ್ರಿಮಿನಲ್‍ಗಳ ಹತ್ಯೆ :
ಕಾನ್ಪುರದಲ್ಲಿ ಇಂದು ಮುಂಜಾನೆ ನಡೆದ ಮತ್ತೊಂದು ಎನ್‍ಕೌಂಟರ್‍ನಲ್ಲಿ ಇಬ್ಬರು ಕುಖ್ಯಾತ ಕ್ರಿಮಿನಲ್‍ಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಕಾನ್ಪುರ ಪೊಲೀಸ್ ಮಹಾ ನಿರೀಕ್ಷಕ ಮೋಹಿತ್ ಅಗರ್‍ವಾಲ್ ತಿಳಿಸಿದ್ದಾರೆ.  ಹತರಾಗ ಕ್ರಿಮಿನಲ್‍ಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ತೀವ್ರ ಗಾಯಗಳಾಗಿವೆ.

Facebook Comments