ವಕೀಲರ ಸಂಘದ ಅಧ್ಯಕ್ಷೆ ಕೊಲೆ ಖಂಡಿಸಿ ನ್ಯಾಯವಾದಿಗಳ ಪ್ರತಿಭಟನೆ, ಕೋರ್ಟ್ ಕಲಾಪ ಬಹಿಷ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮುಝಫರ್‍ನಗರ್, ಜೂ.13- ಉತ್ತರ ಪ್ರದೇಶ ರಾಜ್ಯ ವಕೀಲರ ಸಂಘದ ಅಧ್ಯಕ್ಷೆ ದರ್ವೇಶ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಕೊಂದಿರುವುದನ್ನು ಖಂಡಿಸಿ ರಾಜ್ಯದ ವಕೀಲರು ವಿವಿಧ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿದ್ದಾರೆ. ಇದರಿಂದ ಕೋರ್ಟ್ ಕಲಾಪಗಳಿಗೆ ಅಡಚಣೆಯಾಗಿ ಸಾರ್ವಜನಿಕರಿಗೆ ಇದರ ಬಿಸಿ ತಟ್ಟಿತು.

ಇದರಿಂದಾಗಿ ಕೋರ್ಟ್ ಕಚೇರಿಗಳಲ್ಲಿ ಕಲಾಪಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಪಶ್ಚಿಮ ಉತ್ತರ ಪ್ರದೇಶದ ಭಾಗ್‍ಪಥ್, ಬಿಜ್ನೂರ್, ಮುಜಾಫರ್‍ಪುರ್, ಮೀರತ್, ಸಹರನ್‍ಪುರ್ ಮತ್ತು ಶಾಮ್ಲಿ ಜಿಲ್ಲೆಗಗಳೂ ಸೇರಿದಂತೆ ವಿವಿಧ ಕೋರ್ಟ್‍ಗಳಲ್ಲಿ ವಕೀಲರ ಪ್ರತಿಭಟನೆಯಿಂದಾಗಿ ನ್ಯಾಯಾಂಗ ವ್ಯವಹಾರಗಳ ಬಗ್ಗೆ ಪರಿಣಾಮ ಉಂಟಾಗಿದೆ.

ಇಂದು ಬೆಳಿಗ್ಗೆ ನಡೆದ ಸಂತಾಪ ಸೂಚಕ ಸಭೆಯಲ್ಲಿ ಈ ಹತ್ಯೆಯನ್ನು ಖಂಡಿಸಲಾಗಿದೆ. ರಾಜ್ಯ ವಕೀಲರ ಸಂಘದ ಕರೆಯ ಮೇಳೆ ನಾವು ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮುಝಪರ್‍ನಗರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸೈಯದ್ ನಾಸೀರ್ ಹೈದರ್ ಹೇಳಿದ್ದಾರೆ.

ಆಗ್ರಾದಲ್ಲಿ ನಿನ್ನೆ ರಾಜ್ಯ ವಕೀಲರ ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ದರ್ವೇಶ್ ಸಿಂಗ್ ಅವರನ್ನು ಆಗ್ರಾದ ನ್ಯಾಯಾಲಯ ಆಚರಣದಲ್ಲಿ ವಕೀಲ ಮನೀಷ್ ಶರ್ಮ ಎಂಬುವರು ಗುಂಡು ಹಾರಿಸಿ ಕೊಂದು ತಾವೂ ಆತ್ಮಹತ್ಯೆಗೆ ಯತ್ನಿಸಿದ್ದರು.

Facebook Comments