ಪೌರತ್ವ ಗಲಭೆ : ಉತ್ತರ ಪ್ರದೇಶದಲ್ಲಿ 500 ದಾಳಿಕೋರರ ಆಸ್ತಿ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಡಿ.27-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಉದ್ದೇಶಿತ ಪೌರತ್ವ ರಾಷ್ಟ್ರೀಯ ನೋಂದಣಿ (ಎನ್‍ಆರ್‍ಸಿ) ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಗಲಭೆ, ದೊಂಬಿ, ದಾಂಧಲೆ ಮತ್ತು ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಮುಂದುವರಿಸಿದೆ.

ರಾಜ್ಯವ ವಿವಿಧೆಡೆ ಪ್ರತಿಭಟನೆ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ 500ಕ್ಕೂ ಹೆಚ್ಚು ದಾಳಿಕೋರರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನು ಜರುಗಿಲಾಗುತ್ತಿದೆ. ರಾಜಧಾನಿ ಲಕ್ನೋ ಮುಜಫರ್‍ನಗರ್, ಮೀರತ್, ಸಂಭಾಲ್‍ಪುರ್, ರಾಮಪುರ್, ಕಾನ್ಸುಪರ್, ಫಿರೋಜಾಬಾದ್, ಮಾವೋ ಮತ್ತು ಬಲುಂದ್‍ಶಹರ್ ಸೇರಿದಂತೆ ವಿವಿಧೆಡೆ ಗಲಭೆ ವೇಳೆ ಪರಿಸ್ಥಿತಿಯ ದುರ್ಲಾಭ ಪಡೆದು ದಾಂಧಲೆ ನಡೆಸಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಇಂಥ ಗಲಭೆಕೋರರ ಸ್ಥಿರ ಮತ್ತು ಚರಾಸ್ತಿಗಳನ್ನು ಗುರುತಿಸಲಾಗಿದ್ದು, 500ಕ್ಕೂ ಹೆಚ್ಚು ಮಂದಿಯ ಸ್ವತ್ತುಗಳನ್ನು ಜಪ್ತಿ ಮಾಡಲು ಆದೇಶ ನೀಡಿಲಾಗಿದೆ. ಈ ಆದೇಶದ ಅನ್ವಯ ಅಧಿಕಾರಿಗಳು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಜರುಗಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಉಂಟು ಮಾಡುವವರ ಸ್ವತ್ತುಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿ ಈ ಸಂಬಂಧ ಸೂಚನೆಯೊಂದನ್ನು ಹೊರಡಿಸಿದ್ದರು. ಅದಾದ ನಂತರ ಮೊದಲ ಭಾಗವಾಗಿ ಲಕ್ನೋ ಮತ್ತು ಮುಜಾಫರ್‍ನಗರ್‍ನಲ್ಲಿ ಮೊನ್ನೆ 50ಕ್ಕೂ ಹೆಚ್ಚು ಗಲಭೆಕೋರರ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಕ್ರಮ ಮತ್ತಷ್ಟು ಮುಂದುವರಿಯುವ ನಿರೀಕ್ಷೆ ಇದೆ.

Facebook Comments