ಕ್ರೂಸರ್ ಮೇಲಿನ NCB ದಾಳಿ ನಕಲಿ ಎಂದಿದ್ದ ಸಚಿವ ಮಲ್ಲಿಕ್‍ಗೆ ವೈ ಶ್ರೇಣಿ ಭದ್ರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.14-ಸಮುದ್ರ ಮಧ್ಯಭಾಗದಲ್ಲಿ ನಿಲ್ಲಿಸಿದ್ದ ಕ್ರೂಷರ್‍ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಎನ್‍ಸಿಬಿ ಅಧಿಕಾರಿಗಳು ನಡೆಸಿದ್ದ ದಾಳಿ ನಕಲಿ ಎಂದು ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರಿಗೆ ಅಲ್ಲಿನ ಸರ್ಕಾರ ವೈ ಶ್ರೇಣಿ ಭದ್ರತೆ ನೀಡಿದೆ.

ಮಲ್ಲಿಕ್ ಅವರಿಗೆ ನಾಲ್ಕು ಮಂದಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳು ಹಾಗೂ ಪೈಲಟ್ ಕಾರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಅವರ ಮನೆ ಕಾವಲಿಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ 3 ರಂದು ಎನ್‍ಸಿಬಿ ಅಧಿಕಾರಿಗಳು ಸಮುದ್ರದಲ್ಲಿ ನಿಲ್ಲಿಸಿದ್ದ ಕ್ರೂಷರ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿ, ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಆತನ ಸ್ನೇಹಿತ ಅರ್ಬಾಜ್ ಮರ್ಚಂಟ್‍ನನ್ನು ಬಂಧಿಸಿದ್ದರು.

ಕಳೆದ ಒಂದು ವರ್ಷದಿಂದ ಬಿಜೆಪಿಯವರು ಬಾಲಿವುಡ್‍ಗೆ ಹಾಗೂ ಮಹಾರಾಷ್ಟ್ರ ಮತ್ತು ಮಹಾ ಅಘಾಢಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ಹುನ್ನಾರದಿಂದ ಎನ್‍ಸಿಬಿ ಅಧಿಕಾರಿಗಳಿಂದ ನಕಲಿ ದಾಳಿ ನಡೆಸಿದ್ದಾರೆ ಎಂದು ಮಲ್ಲಿಕ್ ಆರೋಪಿಸಿದ್ದರು.

ಅವರ ಈ ಹೇಳಿಕೆ ನಂತರ ಹಲವಾರು ಮಂದಿ ಮಲ್ಲಿಕ್ ಅವರಿಗೆ ಪ್ರಾಣ ಬೆದರಿಕೆ ಹಾಕಿ ಅವರ ಹೇಳಿಕೆಯನ್ನು ಖಂಡಿಸಿದ್ದರು. ಮಲ್ಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅವರಿಗೆ ವೈ ಶ್ರೇಣಿ ಭದ್ರತೆ ನೀಡಿದೆ.

Facebook Comments