ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸುಪ್ರೀಂ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ತಮಿಳುನಾಡು ಚುನಾವಣಾ ಆಯೋಗ ನಗರಸ್ಥಳೀಯ ಸಂಸ್ಥೆಗಳಿಗೆ ನಾಲ್ಕು ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಗಡುವು ನೀಡಿದೆ. ನಿಗದಿತ ಕಾಲಾವಯಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಬೇಕು ಎಂದು ಹಲವಾರು ಮಂದಿ ಸುಪ್ರೀಂಕೋರ್ಟ್ ಮೋರೆ ಹೋಗಿದ್ದರು.

ತಮಿಳುನಾಡಿನಲ್ಲಿ ಹೊಸದಾಗಿ ರಚನೆಯಾಗಿರುವ 9 ಜಿಲ್ಲೆಗಳಲ್ಲಿ ಕ್ಷೇತ್ರ ವಿಂಗಡಣೆ ಸೇರಿದಂತೆ ಇತರ ಕೆಲಸಗಳಿಗೆ ಕನಿಷ್ಠ ಏಳು ತಿಂಗಳ ಸಮಯಾವಕಾಶ ಬೇಕು. ಹಾಗಾಗಿ 2022ರ ಏಪ್ರಿಲ್‍ವರೆಗೂ ವಿನಾಯಿತಿ ನೀಡಿ ಎಂದು ತಮಿಳುನಾಡು ಚುನಾವಣಾ ಆಯೋಗ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ಜೊತೆಗೆ ಕೋವಿಡ್ ಕಾರಣಕ್ಕಾಗಿ ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಆಯೋಗ ಹೇಳಿತ್ತು.

ಕಳೆದ ವಾರ ನಡೆದ ವಿಚಾರಣೆಯಲ್ಲಿ ಏಳು ತಿಂಗಳವರೆಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆಗೆ, ಲೋಕಸಭೆ ಉಪ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಆಗ ರ್ಯಾಲಿ ಮಾಡಲು ಬಿಡುತ್ತೀರಾ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಷಯ ಬಂದಾಗ ಕೋವಿಡ್ ಕಾರಣ ಹೇಳುತ್ತಿರಾ ಎಂದು ನ್ಯಾಯಮೂರ್ತಿಗಳು ಅಸಮದಾನ ವ್ಯಕ್ತ ಪಡಿಸಿದ್ದರು.

ಆಯೋಗದ ಅಭಿಪ್ರಾಯವನ್ನು ತಳ್ಳಿ ಹಾಕಿದ ನ್ಯಾಯಾಲಯ ಪ್ರಮಾಣ ಪತ್ರ ಸಲ್ಲಿಸುವಂತೆ ಸಲಹೆ ನೀಡಿತ್ತು. ಅದರಂತೆ ಇಂದು ವಿಚಾರಣೆ ವೇಳೆ ನಾಲ್ಕು ತಿಂಗಳ ಕಾಲಾವಯನ್ನು ಸುಪ್ರೀಂಕೋರ್ಟ್ ನೀಡಿದೆ. ತಮಿಳುನಾಡಿನಲ್ಲಿ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ಸುಪ್ರೀಂಕೋರ್ಟ್ ಸೂಚನೆಯ ಮೇರೆ ಪ್ರಸ್ತುತ ನಡೆಯುತ್ತಿದೆ.

Facebook Comments