ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಫೆ.28-ಪುಲ್ವಾಮಾ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನ ಮೂಲದ ಕುಖ್ಯಾತ ಭಯೋತ್ಪಾದಕ ಸಂಘಟನೆ ಜೈಷ್-ಎ-ಮಹಮದ್(ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಭಾರತದ ಪ್ರಯತ್ನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಲಭಿಸಿದೆ.

ಕುಪ್ರಸಿದ್ದ ಭಯೋತ್ಪಾದಕ ಅಜರ್‍ನನ್ನು ಜಾಗತಿಕ ಭಯೋತ್ಪಾದಕ(ಗ್ಲೋಬಲ್ ಟೆರ್ರರಿಸ್ಟ್) ಆಗಿ ಘೋಷಿಸಬೇಕೆಂದು ಅಮೆರಿಕ, ಇಂಗ್ಲೆಂಡ್ ಮತ್ತು ಫಾನ್ಸ್ ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್‍ಎಸ್‍ಸಿ)ಗೆ ಹೊಸ ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಭಾರತಕ್ಕೆ ಜಯ ದೊರೆತಿದೆ.

ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟರೆ ಅಥವಾ ಅಂತಾರಾಷ್ಟ್ರೀಯ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟರೆ ಆತನ ಜಾಗತಿಕ ಪ್ರವಾಸ ನಿರ್ಬಂಧ, ಆಸ್ತಿಪಾಸ್ತಿಗಳ ಜಪ್ತಿ ಮತ್ತು ಶಸ್ತ್ರಾಸ್ತ್ರಗಳ ಮೇಲೆ ದಿಗ್ಬಂಧನ ಹೇರಲಾಗುತ್ತದೆ. ಇದರಿಂದ ಆತ ಮತ್ತು ಆತನ ಭಯೋತ್ಪಾದನೆ ಜಾಲಗಳಿಗೆ ದೊಡ್ಡ ಕೊಡಲಿ ಪೆಟ್ಟು ಬೀಳಲಿದೆ.

ವಿಶ್ವಸಂಸ್ಥೆಯ 15 ಸದಸ್ಯ ರಾಷ್ಟ್ರಗಳ ಭದ್ರತಾಮಂಡಳಿ ಸಭೆಯಲ್ಲಿ ಮೂರು ಕಾಯಂ ಪರಮಾಧಿಕಾರ ಹಕ್ಕು ಚಲಾಯಿಸುವ(ವಿಟೋ) ಅಧಿಕಾರ ಹೊಂದಿರುವ ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಈ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅಜರ್ ವಿನಾಶಕ್ಕೆ ಕಾಲಗಣನೆ ಆರಂಭವಾಗಿದೆ.

ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ಕಳೆದ 19 ವರ್ಷಗಳಲ್ಲಿ ವಿಶ್ವಸಂಸ್ಥೆ ಮುಂದೆ ಸಲ್ಲಿಕೆಯಾಗಿರುವ ನಾಲ್ಕನೇ ಪ್ರಸ್ತಾವನೆ ಇದಾಗಿದೆ. ಆದರೆ ಈ ಬಾರಿ ಸಲ್ಲಿಸಲಾಗಿರುವ ಪ್ರಸ್ತಾವನೆಯು ಅತ್ಯಂತ ಪ್ರಬಲವಾಗಿದ್ದು, ಪುಲ್ವಾಮಾ ಯೋಧರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

2009ರಲ್ಲೇ ಭಾರತವು ಭದ್ರತಾ ಮಂಡಳಿ ಮುಂದೆ ಪ್ರಸ್ತಾವನೆಯೊಂದನ್ನು ಸಲ್ಲಿಸಿ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸುವಂತೆ ಆಗ್ರಹಿಸಿತ್ತು.

2016ರಲ್ಲಿ ಫಿ-3 ದೇಶಗಳೊಂದಿಗೆ (ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್) ಭಾರತವು ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸಿತ್ತು. 2016ರ ಜನವರಿಯಲ್ಲಿ ಪಠಾಣ್‍ಕೋಟ್ ವಾಯು ನೆಲೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅಜರ್ ಸೂತ್ರಧಾರನಾಗಿದ್ದ.

2017ರಲ್ಲಿ ಪಿ-3 ಮತ್ತೆ ಇದೇ ರೀತಿಯ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಎಲ್ಲ ಮೂರು ಸಂದರ್ಭಗಳಲ್ಲೂ ಹಕ್ಕು ಚಲಾವಣೆ ಅಧಿಕಾರ ಹೊಂದಿರುವ ಚೀನಾ ಅಡ್ಡಗಾಲಾಗಿತ್ತು.

ಆದರೆ ನಿನ್ನೆ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾ ಕೂಡ ಭಯೋತ್ಪಾದನೆ ನಿಲ್ಲಿಸುವಂತೆ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕ್‍ನನ್ನು ಆಗ್ರಹಿಸಿದೆ. ಇದು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಭಾರತಕ್ಕೆ ಮತ್ತೊಂದು ಪ್ರಬಲ ಬೆಂಬಲ ದೊರೆತಂತಾಗಿದೆ. ಅಲ್ಲದೆ, ಈ ಬಾರಿ ಅಜರ್ ವಿರುದ್ಧ ಮತ ಚಲಾಯಿಸುವ ಆಶಾಭಾವನೆಯೂ ವ್ಯಕ್ತವಾಗಿದೆ.

ಅಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಮುಂದಿನ ತಿಂಗಳ ಘಾನಾ ದೇಶದಿಂದ ಫ್ರಾನ್ಸ್‍ಗೆ ವರ್ಗಾವಣೆಯಾಗಲಿರುವುದೂ ಕೂಡ ಮಹತ್ವದ ಬೆಳವಣಿಗೆಯಾಗಿದೆ.  ಈ ಮೂಲಕವೂ ಉಗ್ರರ ಮಹಾಗಜ ಅಜರ್‍ನನ್ನು ಖೆಡ್ಡಾದಲ್ಲಿ ಬೀಳಿಸಲು ಫ್ರಾನ್ಸ್‍ಗೆ ಪ್ರತ್ಯೇಕ ತಂತ್ರ ಹೆಣೆದಿದೆ.

Facebook Comments

Sri Raghav

Admin