ಅಮೆರಿಕದಲ್ಲಿ ಹೆಮ್ಮಾರಿ ಕೊರೋನಾದಿಂದ ಚೇತರಿಸಿಕೊಂಡ 7.74 ಲಕ್ಷ ರೋಗಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಜೂ. 8-ಕಿಲ್ಲರ್ ಕೋವಿಡ್-19 ವೈರಸ್ ಹೆಮ್ಮಾರಿ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಕಳೆದ ಎರಡು ದಿನಗಳಿಂದ ಸೋಂಕು ಮತ್ತು ಸಾವು ಪ್ರಕರಣದಲ್ಲಿ ಇಳಿಕೆಯಾಗಿದೆ. ಈವರೆಗೆ ಸುಮಾರು 7.74 ಲಕ್ಷ ರೋಗಿಗಳು ಚೇತರಿಸಿಕೊಂಡು ಗುಣಮುಖ್ಯರಾಗುತ್ತಿರುವುದು ಸಮಾಧಾನಕರ ಸಂಗತಿ.

ಈ ನಡುವೆ ಮೃತರ ಸಂಖ್ಯೆ 1.14 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 20.30 ಲಕ್ಷ ದಾಟಿದೆ. ಅಗೋಚರ ವೈರಸ್ ವಿಶ್ವದ ಸೂಪರ್‍ಪವರ್ ದೇಶವನ್ನು ಬೆಂಬಿಡದೇ ಕಾಡುತ್ತಿದ್ದು, ಸೋಂಕು ಮತ್ತು ಸಾವು ಪ್ರಮಾಣದಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,13,061 ಮಂದಿ ಮೃತಪಟ್ಟಿದ್ದು, ಇಂದು ಬೆಳಗಿನ ಮಾಹಿತಿ ಪ್ರಕಾರ ಮರಣ ಪ್ರಮಾಣ 1.14 ಸನಿಹದಲ್ಲಿದೆ. ಅಲ್ಲದೆ, ಈವರೆಗೆ 20,26,597 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಇವರಲ್ಲಿ ಸುಮಾರು 17,000 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 7.74 ಲಕ್ಷ ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ದಾರೆ, ಗುಣಮುಖರಾಗಿದ್ದಾರೆ.

ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಸಾಂಬಾ ರಾಷ್ಟ್ರದಲ್ಲಿ ಸುಮಾರು 7.11 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 37,312ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಸ್ಪೇನ್ ಮತ್ತು ಬ್ರಿಟನ್ ದೇಶಗಳಿವೆ.

Facebook Comments