ಆನ್‍ಲೈನ್ ತರಗತಿ : ಅಮೆರಿಕ ತೊರೆಯಬೇಕಾದ ಆತಂಕದಲ್ಲಿ ಭಾರತೀಯ ವಿದ್ಯಾರ್ಥಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.7-ವಿನಾಶಕಾರಿ ಕೋವಿಡ್-19 ವೈರಸ್‍ನಿಂದಾಗಿ ಅಮೆರಿಕದಲ್ಲಿರುವ ಭಾರತೀಯರು ತೀವ್ರ ಸಂಕಷ್ಟಕ್ಕೆ ಒಳಗಾಗಿರುವಾಗಲೇ ಅಲ್ಲಿನ ಸರ್ಕಾರ ಹೊರಡಿಸಿರುವ ಹೊಸ ಕಾನೂನಿನಿಂದಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ.

ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಆನ್‍ಲೈನ್ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಭಾರತೀಯರೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ.

ಅಮೆರಿಕದ ಫೆಡರಲ್ ಇಮಿಗ್ರೇಷನ್ ಅಥಾರಿಟಿ ಇಂದು ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿನ ನಿಯಮಗಳು ಭಾರತ ಸೇರಿದಂತೆ ಯುಎಸ್‍ಎಯಲ್ಲಿರುವ ವಿದೇಶಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಚಕಾರ ತಂದೊಡ್ಡಲಿದೆ.

ಅಮೆರಿಕದ ಶಾಲಾ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಪೂರ್ಣ ಪ್ರಮಾಣದಲ್ಲಿ ಆನ್‍ಲೈನ್ ತರಗತಿಗಳು ಅರಂಭವಾದರೆ ವಿದೇಶಿ ವಿದ್ಯಾರ್ಥಿಗಳು ಅಮೆರಿಕವನ್ನು ತೊರೆಯಬೇಕು ಅಥವಾ ಬೇರೆ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆಯಾಗಬೇಕೆಂಬ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ವಲಸೆ ಪ್ರಾಧಿಕಾರ ಹೊರಡಿಸಿದೆ.

ಯುಎಸ್ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‍ಫೋರ್ಸ್‍ಮೆಂಟ್ ಇಲಾಖೆ ಹೊರಡಿಸಿರುವ ಈ ಹೊಸ ಮಾರ್ಗಸೂಚಿ ಭಾರತ ಸೇರಿದಂತೆ ವಿವಿದ ದೇಶಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟುಮಾಡುವುದಲ್ಲದೆ ಅಲ್ಲಿನ ವಿಶ್ವವಿದ್ಯಾಲಯಗಳಿಗೂ ಸಂಕಷ್ಟ ತಂದೊಡ್ಡಿದೆ.  ಈಗಾಗಲೇ ಭಾರೀ ಸೋಂಕು-ಸಾವು-ನೋವು ಅನುಭವಿಸುತ್ತಿರುವ ಅಮೆರಿಕದಲ್ಲಿನ ವಿಶ್ವವಿದ್ಯಾಲಯಗಳು ತರಗತಿಗಳನ್ನು ಕೂಡಲೇ ಪುನರಾರಂಭ ಮಾಡುವಂತೆ ಹೆಚ್ಚುವರಿ ಒತ್ತಡವನ್ನು ಈ ಮಾರ್ಗಸೂಚಿ ಶಿಕ್ಷಣ ಸಂಸ್ಥೆಗಳ ಮೇಲೆ ಹೇರುತ್ತಿದೆ.

ಶಾಲಾ-ಕಾಲೇಜುಗಳು ಪುನರಾರಂಭವಾದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಹಾಜರಾತಿಯ ಕೆಲವೇ ಕೆಲವು ತರಗತಿಗಳು ಆರಂಭವಾಗುತ್ತದೆ. ನಂತರ ಇಡೀ ಪಠ್ಯಕ್ರಮ ಆನ್‍ಲೈನ್ ಆಗಿ ಪರಿವರ್ತಿನೆಯಾಗುತ್ತದೆ. ವಿದೇಶದ ವಿದ್ಯಾರ್ಥಿಗಳಿಗೆ ಹೊಸ ವೀಸಾಗಳನ್ನು ನೀಡುವುದಿಲ್ಲ. ಅವರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪರ್ಯಾಯ ಮಾರ್ಗವನ್ನು ನೋಡಿಕೊಳ್ಳಬೇಕು ಅಥವಾ ಬೇರೆ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆ ಪಡೆಯಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದು ಇನ್ನು ಕೆಲವೇ ದಿನಗಳಲ್ಲಿ ಭಾರತೀಯರೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಅಮೆರಿಕ ತೊರೆಯಬೇಕೆಂಬ ಸೂಚನೆಯಾಗಿದೆ.  ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಯೂನಿವರ್ಸಿಟಿಗಳು ಈಗ ಗೊಂದಲದಲ್ಲಿ ಸಿಲುಕಿವೆ.  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಹೊಸ ಮಾರ್ಗಸೂಚಿ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Facebook Comments