ಸೇಡಿಗಿಳಿದ ಇರಾನ್, ಅಮೆರಿಕ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಗ್ದಾದ್/ಟೆಹ್ರಾನ್/ವಾಷಿಂಗ್ಟನ್, ಜ.8- ಅತ್ಯಂತ ಪ್ರಭಾವಿ ಸೇನಾಧಿಕಾರಿ ಖಾಸಿಂ ಸೊಲೈಮಾನಿ ಹತ್ಯೆ ನಂತರ ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ಧಾತಂಕ ಹೆಚ್ಚಾಗುತ್ತಿರುವಾಗಲೇ ಇರಾಕ್‍ನಲ್ಲಿನ ಅಮೆರಿಕಾ ವಾಯು ನೆಲೆಗಳ ಮೇಲೆ ಇರಾನ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇರಾನ್‍ನ ಈ ದಾಳಿಗೆ ಅಮೆರಿಕಾ ಕುಪಿತಗೊಂಡಿದ್ದು, ಪ್ರತಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ನಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್ ಇದೇ ವೇಳೆ ಸ್ಪಷ್ಟಪಡಿಸಿದೆ. ನಿನ್ನೆ ರಾತ್ರಿ ಇರಾನ್ 12ಕ್ಕೂ ಹೆಚ್ಚು ಮಿಸೈಲ್ ಗಳನ್ನು ಹಾರಿಸಿದೆ. ಇರಾಕ್‍ನಲ್ಲಿರುವ ಎರಡು ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ.

ಕ್ಷಿಪಣಿಗಳು ಇರಾಕ್ ನೆಲೆಯಿಂದ ಹಾರಿ ಬಂದಿರುವುದು ಬಹುತೇಕ ಖಚಿತವಾಗಿದ್ದು, ಇರಾಕ್ ಹಾಗೂ ಅಮೆರಿಕಾ ಜಂಟಿಯಾಗಿ ಬಳಕೆ ಮಾಡುವ ವಾಯುನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ಡಜನ್‍ಗೂ ಹೆಚ್ಚು ಕ್ಷಿಪಣಿಗಳ ದಾಳಿಯಲ್ಲಿ ಸಾವು-ನೋವು ಅಥವಾ ಸೇನಾ ನೆಲೆಗಳ ಹಾನಿ ಬಗ್ಗೆ ಖಚಿತ ಮಾಹಿತಿ ಈವರೆಗೂ ಲಭ್ಯವಾಗಿಲ್ಲ.

ಇರಾಕ್ ರಾಜಧಾನಿ ಬಾದ್ದಾದ್‍ನಲ್ಲಿನ ಅಮೆರಿಕಾದ ರಾಯಭಾರ ಕಚೇರಿ ಮೇಲೆ ನಡೆದ ದಾಳಿ ಪ್ರತೀಕಾರವಾಗಿ ಹಾಗೂ ಮತ್ತಷ್ಟು ಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಕೆಲವೇ ದಿನಗಳ ಹಿಂದೆ ಬಾಗ್ದಾದ್‍ನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯೊಳಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ್ದರು.

ಅಮೆರಿಕಾದ ದಾಳಿಗೆ ಇರಾನ್ ಬೆಂಬಲಿತ ಶಿಯಾ ಬಂಡುಕೋರ ಸಂಘಟನೆ ಕತೈಬ್ ಹಿಜ್ಲುಬ್ಲಾದ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ರಾಯಭಾರ ಕಚೇರಿಯ ಕಾಂಪೌಂqಗೆ ಬೆಂಕಿ ಇಟ್ಟಿದ್ದರು. ಅಲ್ಲದೆ ಇರಾಕ್‍ನಲ್ಲಿರುವ ಅಮೆರಿಕಾ ಪಡೆಗಳ ಮೇಲೆ ಕಳೆದ ಹಲವು ತಿಂಗಳಿಂದ ದಾಳಿ ನಡೆಸಿದ್ದವು. ಹಾಗಾಗಿ ಅಮೆರಿಕಾ ಪ್ರತೀಕಾರ ತೆಗೆದುಕೊಂಡಿದೆ.

ಟೆಹ್ರಾನ್ ವರದಿ: ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ ಆಕ್ರಮಣಶೀಲತೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತೇವೆ. ಹೀಗಾಗಿ ಅಮೆರಿಕಾದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್‍ನ ವಿದೇಶಾಂಗ ಸಚಿವ ಜಾವದ್ ಜಾರ್ಫಿ ಪ್ರತಿಕ್ರಿಯೆ ನೀಡಿದ್ದಾರೆ. ಸೇನಾಧಿಕಾರಿ ಖಾಸಿಂ ಸೊಲೈಮಾನಿ ಹತ್ಯೆ ಬಳಿ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳ ಪರಿಸ್ಥಿತಿಯಿಂದಾಗಿ ವಿಶ್ವದಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಇರಾಕ್ ನಲ್ಲಿನ ಅಮೆರಿಕಾ ವಾಯುಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಆರಂಭಿಸಿದೆ.

ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‍ನ ವಿದೇಶಾಂಗ ಸಚಿವ, ವಿಶ್ವಸಂಸ್ಥೆ ಪರಿಚ್ಛೇದ 51ರ ಪ್ರಕಾರ ನಮ್ಮ ದೇಶದ ನಾಗರಿಕರು ಮತ್ತು ಹಿರಿಯ ಸೇನಾಧಿಕಾರಿಗಳ ಮೇಲೆ ಅಮೆರಿಕಾ ಸಶಸ್ತ್ರ ದಾಳಿ ನಡೆಸಿದಾಗ ಆತ್ಮರಕ್ಷಣೆಗಾಗಿ ತೆಗೆದುಕೊಂಡ ಕ್ರಮವೇ ಅಮೆರಿಕಾ ವಾಯುಪಡೆ ಮೇಲೆ ನಡೆಸಿದ ಇಂದಿನ ಕ್ಷಿಪಣಿ ದಾಳಿಯಾಗಿದೆ ಎಂದಿದ್ದಾರೆ.

ನಮ್ಮದು ಅತ್ಯಂತ ಬಲಿಷ್ಠ ಸೇನೆ ಇರಾಕ್‍ನ ತನ್ನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಎಲ್ಲವೂ ಸರಿಯಾಗಿದೆ.ನಮ್ಮದು ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಹೊಂದಿರುವ ದೇಶವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Facebook Comments