ಅಮೆರಿಕವನ್ನು ಆವರಿಸಿಕೊಂಡ ಕೊರೋನಾ ಕಬಂಧ ಬಾಹು, 52,000 ಕ್ಕೂ ಹೆಚ್ಚು ಸಾವು..!
ನ್ಯೂಯಾರ್ಕ್/ವಾಷಿಂಗ್ಟನ್, ಏ.25-ಹಾರರ್ ಸಿನಿಮಾಗಳನ್ನೂ ಮೀರಿಸುವ ರೀತಿಯಲ್ಲಿ ಕೊರೊನಾ ವೈರಸ್ ಅಮೆರಿಕ ಮೇಲೆ ಭಯಾನಕ ದಾಳಿ ಮುಂದುವರಿಸಿದೆ. ವಿಶ್ವದಲ್ಲೇ ಕೋವಿಡ್-19ಗೆ ಅತಿಹೆಚ್ಚು ರೋಗಿಗಳು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ.
ಸೂಪರ್ಪವರ್ ದೇಶದಲ್ಲಿ ಮೃತರ ಸಂಖ್ಯೆ 52,000ಕ್ಕೇರಿದೆ. ಅಲ್ಲದೆ, 9.5 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಮುಂದಿನ 24 ತಾಸುಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ವಾಷಿಂಗ್ಟನ್ನ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕ ಅಂಶಗಳ ಪ್ರಕಾರ, ನಿನ್ನೆ ಒಂದೇ ದಿನದ ಅವಧಿಯಲ್ಲಿ ಅಮೆರಿಕದಲ್ಲಿ 1,250 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸುಮಾರು 3,500 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.
ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಅಮೆರಿಕದಲ್ಲಿ ಈವರೆಗೆ 87,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ ಸುಮಾರು 20,000ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 3.50 ಲಕ್ಷ ದಾಟಿದೆ.
ಅಮರಿಕನ್ನರ ಬದುಕು ಅತಂತ್ರವಾಗಿದೆ. ಒಂದೆಡೆ ಬಲಿಗಾಗಿ ಕಾದಿರುವ ಹೆಮ್ಮಾರಿ, ಇನ್ನೊಂದೆಡೆ ಯಾವ ಕ್ಷಣದಲ್ಲಿ ಸೋಂಕು ಅಮರಿಕೊಳ್ಳುತ್ತದೆಯೇ ಎಂಬಿ ಭೀತಿ, ಮತ್ತೊಂದೆಡೆ ಉದ್ಯೋಗ ನಷ್ಟದಿಂದ ಆರ್ಥಿಕ ಸಂಕಷ್ಟ ಇವುಗಳಿಂದ ಶ್ರೀಮಂತ ದೇಶದ ಜನರ ಜೀವನ ಅತಂತ್ರವಾಗಿದೆ.