BIG NEWS : ವಿಶ್ವ ಆರೋಗ್ಯ ಸಂಸ್ಥೆ(WHO)ನಿಂದ ಅಧಿಕೃತವಾಗಿ ಹಿಂದೆ ಸರಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.8- ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಧಿಕೃತವಾಗಿ ಡಬ್ಲ್ಯೂ ಎಚ್ ಓ ಸಂಸ್ಥೆಯಿಂದ ಹಿಂದೆ ಸರಿದಿದ್ದಾರೆ.

ಈ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರಿಗೆ ಅಮೆರಿಕ ಮಾಹಿತಿ ರವಾನಿಸಿದ್ದು, ಇಂದಿನಿಂದ ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿದೆ ಎಂದು ತಿಳಿದುಬಂದಿದೆ.

ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯಸಂಸ್ಥೆ ಚೀನಾ ಪರವಾಗಿ ನಿಂತಿದ್ದು, ಈ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದೆ. ಅಷ್ಟೇ ಅಲ್ಲದೆ ವಿಶ್ವವ್ಯಾಪಿ ಸೋಂಕು ಹರಡಲು ಕಾರಣವಾಗಿದೆ. ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬ ವಿಚಾರವನ್ನು ಮೊದಲೇ ತಿಳಿಸಿದ್ದರೆ, ವೈರಸ್ ಇಷ್ಟೊಂದು ಭೀಕರವ ಸ್ವರೂಪ ಪಡೆದುಕೊಳ್ಳುತ್ತಿರಲಿಲ್ಲ ಎಂದು ಟ್ರಂಪ್ ಹೇಳುತ್ತಲೇ ಬಂದಿದ್ದಾರೆ.

ಚೀನಾ ಉದ್ದೇಶವಪೂರ್ವಕವಾಗಿ ಜಗತ್ತಿಗೆ ಕೊರೊನಾ ವೈರಸ್ ಹರಡಿಸಿದೆ, ಸೂಕ್ತ ಪರಿಶೀಲನೆ ಅಗತ್ಯ ಎಂದು ಟ್ರಂಪ್ ಆರೋಪಿಸಿದ್ದರು. ಆದರೆ, ಟ್ರಂಪ್ ಆರೋಪಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಪ್ರಿತಿಕ್ರಿಯೆ ನೀಡಿರಲಿಲ್ಲ.

ಇದರಿಂದ ಸಹಜವಾಗಿ ಆಕ್ರೋಶಗೊಂಡ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿ ನಿಂತಿದೆ, ಡಬ್ಲ್ಯೂ ಎಚ್ ಒ ಗೆ ಯುಎಸ್ ನೀಡುವ ಅನುದಾನವನ್ನು ನಾವು ನಿಲ್ಲಿಸುತ್ತೇವೆ ಎಂದು ಮೇ ತಿಂಗಳಲ್ಲಿ ಘೋಷಣೆ ಮಾಡಿದ್ದರು.

ವಿಶ್ವ ಆರೋಗ್ಯ ಸಂಸ್ಥೆಗೆ ಅತಿ ಹೆಚ್ಚು ಅನುದಾನ ನೀಡುವ ಅಮೆರಿಕ ಅಧ್ಯಕ್ಷ ತಮ್ಮ ಘೋಷಣೆಯಂತೆ ಅಧಿಕೃತವಾಗಿ ಹೊರಬಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಪ್ರತಿ ವರ್ಷ 300 ಕೋಟಿ ಅನುದಾನ ನೀಡುತ್ತಿದೆ. ಅಮೆರಿಕ 3 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂಬ ಮಾಹಿತಿ ಇದೆ.

ಅಮೆರಿಕದ ಮಾಧ್ಯಮಗಳ ಪ್ರಕಾರ, ಟ್ರಂಪ್ ಸರ್ಕಾರವು ಡಬ್ಲ್ಯುಎಚ್‍ಒ ದಿಂದ ತನ್ನ ಸದಸ್ಯತ್ವವನ್ನು ಹಿಂಪಡೆಯಲು ಸಂಬಂಧಿಸಿದ ಪತ್ರವನ್ನು ಕಳುಹಿಸಿದೆ. ಜುಲೈ 6ರ ನಂತರ ಅಮೆರಿಕ ಡಬ್ಲ್ಯುಎಚ್‍ಒ ಸದಸ್ಯ ರಾಷ್ಟ್ರವಾಗಿರುವುದಿಲ್ಲ.

1984ರಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಯಾವುದೇ ರಾಷ್ಟ್ರ ಸದಸ್ಯತ್ವವನ್ನು ಹಿಂತೆಗೆದುಕೊಂಡ ಒಂದು ವರ್ಷದ ನಂತರ ದೇಶವನ್ನು ಹೊರಹಾಕಲಾಗುತ್ತದೆ. ಇದರ ಹೊರತಾಗಿ ಅಮೆರಿಕ ಡಬ್ಲ್ಯುಎಚ್‍ಒನ ಎಲ್ಲಾ ಬಾಕಿಗಳನ್ನು ಮರುಪಾವತಿಸಬೇಕಾಗಿದೆ.

ಡಬ್ಲ್ಯುಎಚ್‍ಒನಿಂದ ಬೇರ್ಪಟ್ಟ ಬಗ್ಗೆ ಯುಎಸ್ ನಿಂದ ಮಾಹಿತಿ ಬಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಟ್ರಂಪ್ ಸರ್ಕಾರದ ನಿರ್ಧಾರ ಅಮೆರಿಕವನ್ನು ಅನಾರೋಗ್ಯ ಮತ್ತು ಒಂಟಿಯಾಗಿ ಮಾಡುತ್ತದೆ ಅಮೆರಿಕದ ಸೆನೆಟರ್ ರಾಬರ್ಟ್ ಮೆನೆಂಡೆಜ್ ಹೇಳಿದ್ದಾರೆ.

# ಯು-ಟರ್ನ್ ತೆಗೆದುಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗುಳಿಯುವುದನ್ನು ಏಪ್ರಿಲ್ ನಲ್ಲಿಯೇ ಘೋಷಿಸಿದ್ದರು. ಡಬ್ಲ್ಯುಎಚ್‍ಒಗೆ ನೀಡಿದ ಅನುದಾನದ ಹಣವನ್ನು ಕೂಡ ತಕ್ಷಣದಿಂದ ತಡೆಹಿಡಿಯಲಾಗಿದೆ.
ಡಬ್ಲ್ಯುಎಚ್‍ಒ ಉದ್ದೇಶಪೂರ್ವಕವಾಗಿ ಚೀನಾದಲ್ಲಿ ಕರೋನಾವೈರಸ್ ಕೋವಿಡ್ ಗುರುತಿಸುವುದನ್ನು ವಿಳಂಬಗೊಳಿಸಿದೆ ಮತ್ತು ಅದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ ಎಂದು ಯುಎಸ್ ಆರೋಪಿಸಿದೆ.
ಅದೇ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

Facebook Comments