ಸದನದಲ್ಲಿ ಆಮಿಷ-ಅಮಿತ್ ಷಾ ಚರ್ಚೆಯ ಹಾಸ್ಯ ಪ್ರಸಂಗ….!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.23- ಸಚಿವ ಯು.ಟಿ.ಖಾದರ್ ಸದನದಲ್ಲಿ ಮಾತನಾಡಲು ಎದ್ದು ನಿಂತಾಗ ಕೆಲ ಸ್ವಾರಸ್ಯಕರ ಘಟನೆಗಳು ನಡೆದವು.ಮಾತಿನ ಆರಂಭದಲ್ಲೇ ಖಾದರ್ ಅವರು ಬಿಜೆಪಿಯವರು ನಮ್ಮ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ ಎಂದು ಹೇಳಿದುದು, ಅಮಿತ್ ಷಾ ಎಂಬ ಅರ್ಥದಲ್ಲಿ ಕೇಳಿಸಿದ್ದರಿಂದ ಇದಕ್ಕೆ ಬಿಜೆಪಿಯವರು ಲೇವಡಿ ಮಾಡಿದರು.

ಪ್ರತಿ ಹಂತದಲ್ಲೂ ನೀವು ಅಮಿತ್ ಷಾ ಅವರ ಹೆಸರನ್ನೇ ಜಪ ಮಾಡುತ್ತೀರ ಎಂದು ಕಿಚಾಯಿಸಿದಾಗ ಬಹುಶಃ ಖಾದರ್ ಅವರಿಗೆ ನಾಲಿಗೆ ತಿರುಗುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ವ್ಯಂಗ್ಯವಾಡಿದರು.

ಆಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಖಾದರ್ ಅವರಿಗೆ ನಾಲಿಗೆ ತಿರುಗುತ್ತದೆ, ಬಹುಶಃ ನಿಮಗೇ ತಿರುಗುವುದಿಲ್ಲ ಎಂದು ತಿರುಗೇಟು ನೀಡಿದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಎದ್ದು ನಿಂತು ಇದು ನಮ್ಮ ಸೌಭಾಗ್ಯ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಅಧಿವೇಶನದಲ್ಲಿ ಮಾತನಾಡಿದರು. ನಾವು ಅದನ್ನು ಕೇಳಿ ಪುಣ್ಯವಂತರಾದೆವು ಎಂದು ಕಿಚಾಯಿಸಿದರು.

ನೀವು ನಮ್ಮ ಜಿಲ್ಲೆಯ ಪ್ರತಿಭೆ. ಎಲ್ಲವೂ ನೀವೇ ಮಾತನಾಡುತ್ತಿದ್ದಿರಿ. ಹಾಗಾಗಿ ಅದನ್ನು ಕೇಳಿಸಿಕೊಂಡು ಸುಮ್ಮನೆ ಕುಳಿತಿದ್ದೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.

Facebook Comments