ರಾಜೀನಾಮೆ ಕೊಟ್ಟವರಿಗೆ ಯಾವುದೇ  ಸ್ಥಾನಮಾನ ಬೇಡ : ಯು.ಟಿ.ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.23- ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿರುವ ಶಾಸಕರಿಗೆ ಯಾವುದೇ ಸ್ಥಾನಮಾನವನ್ನು ಕೊಡಬಾರದು ಎಂದು ಬಿಜೆಪಿಯವರಲ್ಲಿ ನಗರ ಅಭಿವೃದ್ಧಿ ಸಚಿವ ಯು.ಟಿ.ಖಾದರ್ ಮನವಿ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡಿಸಿರುವ ವಿಶ್ವಾಸ ಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನ ಉಳಿಸಬೇಕು, ಸಮಾಜ, ರಾಜ್ಯ ಹಾಗೂ ದೇಶದ ಮೇಲೆ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಮುಂಬೈ ಹಾಗೂ ಪೂನಾದಲ್ಲಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು. ಅವರು ರಾಜೀನಾಮೆ ನೀಡಿ ತಮ್ಮ ಕ್ಷೇತ್ರದಲ್ಲಿ ಇರಬಹುದಿತ್ತು.

ಆದರೆ ರೆಸಾರ್ಟ್‍ನಲ್ಲಿ ಕುಳಿತು ನಾವು-ನೀವು ಗುದ್ದಾಡುವುದನ್ನು ನೋಡಿ ನಗುತ್ತಿದ್ದಾರೆ. ಇಂದು ನಮಗೆ, ನಾಳೆ ನಿಮಗೆ ಆಗಬಹುದು. ಅಂತಹವರಿಗೆ ಗೌರವದ ಸ್ಥಾನಮಾನ ಕೊಡಬಾರದು. ಕೆಲವೇ ದಿನಗಳಲ್ಲಿ ನಿಮ್ಮ (ಬಿಜೆಪಿ) ಕ್ರಿಯಾಯೋಜನೆಯ ಹತ್ತು ಪಟ್ಟು ಸೇರಿಸಿ ನಡೆದ ವಿದ್ಯಮಾನಗಳನ್ನು ಬಹಿರಂಗಗೊಳಿಸುತ್ತಾರೆ. ಗಡಿಬಿಡಿ ಮಾಡುವುದು ಬೇಡ. ಕೆಲವು ತಿಂಗಳಲ್ಲಿ ಎಲ್ಲ ವಿಚಾರವೂ ಬಹಿರಂಗವಾಗಲಿದೆ. ಬಲಿಷ್ಠ ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ಯಾರೂ ಮಾಡಬಾರದು. ಜನರಿಂದ ಆಯ್ಕೆಯಾದ ಸರ್ಕಾರವನ್ನು ಬುಡಮೇಲು ಮಾಡಲು ಅವಕಾಶ ಸಿಗಬಾರದು ಎಂದು ಹೇಳೀದರು.

ರಾಜೀನಾಮೆ ನೀಡಿರುವ ಶಾಸಕರಿಂದ ರಾಜ್ಯ ಹಿರಿಮೆ, ಗರಿಮೆ, ಗೌರವಕ್ಕೆ ಕಳಂಕ ತಂದಂ ತಾಗಿದೆ. ಎಲ್ಲವೂ ಮಣ್ಣು ಪಾಲು ಮಾಡಿದ್ದಾರೆ. ಅಂಥವರಿಗೆ ಗೌರವದ ಸ್ಥಾನಮಾನ ಕೊಡಬಾರದು ಎಂದರು.

ಈಗಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಯಾವುದೇ ಗೊಂದಲವಿಲ್ಲದೆ ಆಡಳಿತ ನಡೆಸಲು 150 ಶಾಸಕರ ಬೆಂಬಲ ಬೇಕಾಗುತ್ತದೆ. 113ರ ಸರಳ ಬಹುಮತವಿದ್ದರೆ ಇಂತಹ ಪರಿಸ್ಥಿತಿಯನ್ನೇ ಎದುರಿಸಬೇಕಾಗಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಸ್ಕ್ಯಾನ್ ಮಾಡಕ್ಕಾಗುತ್ತಾ? :ರಾಜಕೀಯ ಪಕ್ಷ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗೆ ಟಿಕೆಟ್ ನೀಡುವಾಗ ಗೆದ್ದ ಮೇಲೆ ಪಕ್ಷಕ್ಕೆ ಕೈಕೊಡುತ್ತಾರೆಯೇ ಎಂದು ಸ್ಕ್ಯಾನ್ ಮಾಡಿ ನೋಡಕ್ಕಾಗುತ್ತಾ, ದುರ್ಬಿನ್ ಹಾಕಿ ನೋಡಕ್ಕಾಗುತ್ತಾ? ಒಳಗೇನಿದೆ ಎಂಬುದು ಹೇಗೆ ಗೊತ್ತಾಗುತ್ತದೆ ಎಂದು ಹೇಳಿದರು.

ಈಗ ನೀವು ಮಾಡಿರುವುದನ್ನು ನಾವೂ ಮಾಡಬಹುದು. ನಮಗೆ ಶಕ್ತಿ ಇಲ್ಲವೆಂದಲ್ಲ. ಎಷ್ಟು ಮಂದಿಯನ್ನು ತೆಗೆದುಕೊಳ್ಳಬಹುದು. ಆದರೆ ಉತ್ತಮ ವ್ಯವಸ್ಥೆಯನ್ನು ಬಿಟ್ಟು ಹೋಗಬೇಕು. ಆ ಕಾರಣಕ್ಕಾಗಿ ನಾವು ನೀವು ಮಾಡಿದಂತೆ ಆಪರೇಷನ್ ಮಾಡಬಾರದು ಎಂದು ನಿರ್ಧರಿಸಿದ್ದೇವೆ ಎಂದರು.

ಪಕ್ಷಾಂತರ ನಿಷೇಧ ಕಾಯ್ದೆ ಇರಬೇಕೇ, ಬೇಡವೇ ಎಂಬ ವಿಚಾರಕ್ಕೆ ಬಂದು ನಿಂತಿದ್ದೇವೆ. ನಮ್ಮ ಮನೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುತ್ತದೆ. ಆದರೆ ಹೊರಗಿನ ವರು ಹುಳಿ ಹಿಂಡುವ ಕೆಲಸ ಮಾಡಬಾರದು. ರಾಜೀನಾಮೆ ನೀಡಿರುವ ಶಾಸಕರ ಹಿಂದೆ ಬಿಜೆಪಿ ಪಾತ್ರ ಇದೆ ಎಂದು ಆರೋಪಿಸಿದರು.

ಜಟಾಪಟಿ: ನೆರೆಪೀಡಿತ ಕೊಡಗಿನ ಸಂತಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಸಚಿವ ಯು.ಟಿ.ಖಾದರ್ ಮತ್ತು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್ ನಡುವೆ ವಾಗ್ವಾದ ನಡೆಯಿತು.

ಮನೆಯಿಲ್ಲದರಿಗೆ ಪ್ರತಿ ತಿಂಗಳು 10 ಸಾವಿರ ರೂ. ಕೊಡಲು ಸರ್ಕಾರ ಕ್ರಮಕೈಗೊಂಡಿದೆ ಎಂದಾಗ, ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರು ತೀವ್ರ ತರಾಟೆ ತೆಗೆದುಕೊಂಡರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ