ಮಂಗಳೂರಿನ ಗೋಲಿಬಾರ್ ಹಾಗೂ ಹಿಂಸಾಚಾರ ಸರ್ಕಾರಿ ಪ್ರಾಯೋಜಿತ : ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.24- ಮಂಗಳೂರಿನ ಗೋಲಿಬಾರ್ ಹಾಗೂ ಹಿಂಸಾಚಾರ ಸರ್ಕಾರಿ ಪ್ರಾಯೋಜಿತ ಎಂಬ ಶಂಕೆ ಇದ್ದು, ಅದನ್ನೂ ಕೂಡ ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಂಗಳೂರು ಗಲಭೆಯನ್ನು ತನಿಖೆಗೆ ಆದೇಶಿಸಿದ ತಕ್ಷಣವೇ ಫೋಲೀಸರು ಗಲಭೆಯ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಯಾರ ಸೂಚನೆ ಮೇಲೆ ನಡೆದಿದೆ, ಇದರ ಹಿಂದಿನ ಉದ್ದೇಶ ಏನು ಎಂಬುದು ಪ್ರಶ್ನಾರ್ಹ.

ವಿಡಿಯೋಗಳನ್ನು ನೋಡಿ ಜನ ಮತ್ತಷ್ಟು ರೊಚ್ಚಿಗೇಳಲಿ, ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಸಂಘರ್ಷ ಹೆಚ್ಚಾಗಲಿ ಎಂಬ ಷಡ್ಯಂತ್ರ ಇದ್ದಂತೆ ಇದೆ ಎಂದು ಆರೋಪಿಸಿದರು. ಮಂಗಳೂರು ಗೋಲಿಬಾರ್ ನಡೆಯುವ ವೇಳೆ ನಾನು ಕೊಪ್ಪಳದ ಕುಷ್ಠಗಿಯಲ್ಲಿದ್ದೆ. ವಿಷಯ ತಿಳಿದು ಆತಂಕವಾಯಿತು. ನನ್ನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಅದರ ಪ್ರತಿಯನ್ನು ಬಿಜೆಪಿ ಪಕ್ಷದ ಕಚೇರಿಗೆ ಠಾಣೆಯಿಂದ ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಪಕ್ಷದ ಕಚೇರಿಯಿಂದ ಪತ್ರಕರ್ತರಿಗೆ ರವಾನೆಯಾಗಿದೆ. ಇದೆಲ್ಲವನ್ನು ನೋಡಿದರೆ ಸರ್ಕಾರದ ಪ್ರಾಯೋಜಕತ್ವದಲ್ಲೇ ಗಲಭೆಗಳು ನಡೆದಂತಿವೆ ಎಂಬ ಅನುಮಾನ ಬರುತ್ತಿದೆ. ಗೋಲಿಬಾರ್ ತನಿಖೆಯ ಜತೆಗೆ ಸರ್ಕಾರಿ ಪ್ರಾಯೋಜಿತ ಗಲಭೆಯ ಬಗ್ಗೆಯೂ ತನಿಖೆ ಆಗಬೇಕೆಂದು ಹೇಳಿದರು.

ಸಿಐಡಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ಜನರಲ್ಲಿದೆ. ಗೋಲಿಬಾರ್ ಮಾಡಿ ಆರೋಪಿ ಸ್ಥಾನದಲ್ಲಿರುವವರು ಪೊಲೀಸರು. ತನಿಖೆ ನಡೆಸುವವರೂ ಸಿಐಡಿ ಪೊಲೀಸರು. ಪೊಲೀಸ್ -ಪೊಲೀಸ್ ಮಧ್ಯೆ ನಡೆದರೆ ನ್ಯಾಯ ಸಿಗುವುದಿಲ್ಲ. ನಿಷ್ಪಕ್ಷಪಾತದಿಂದ ತನಿಖೆ ನಡೆದರೂ ಜನ ಅನುಮಾನದಿಂದಲೇ ನೋಡುತ್ತಾರೆ. ಸಿಐಡಿಗೆ ಬೇರೆ ಕೆಲಸಗಳಿವೆ. ಗೋಲಿಬಾರ್ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಿ ಎಂದು ಖಾದರ್ ಒತ್ತಾಯಿಸಿದರು.

ವೋಟ್ ಬ್ಯಾಂಕ್‍ಗಾಗಿ ಬಿಜೆಪಿ ಸಿಎಎ ಜಾರಿಗೊಳಿಸುತ್ತಿದೆ. ನೋವು ವ್ಯಕ್ತಪಡಿಸುವ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದು ಯೋಜಿತವಲ್ಲ ಸ್ವಯಂಪ್ರೇರಿತ ಪ್ರತಿಭಟನೆ ಎಂದು ಹೇಳಿದರು. ಕಾಂ ಗ್ರೆಸ್ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಗಲಭೆಗೆ ಬಿಜೆಪಿ ನೇರ ಕಾರಣ ಅವರು ಆರೋಪಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ, ಆಪ್ಘಾನಿಸ್ತಾನದಿಂದ ಬಂದ ಮುಸ್ಲಿಂರಿಗೆ ಪೌರತ್ವ ನೀಡಿ ಎಂದು ಯಾರೂ ಕೇಳುತ್ತಿಲ್ಲ. ಮತ್ತು ಅಲ್ಲಿಂದ ಬಂದ ಮುಸ್ಲಿಂಮೇತರರಿಗೆ ಪೌರತ್ವ ನೀಡಬೇಡಿ ಎಂದು ನಾವು ಹೇಳುತ್ತಿಲ್ಲ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಕಾಯ್ದೆಯ ಬಗ್ಗೆ ನಮ್ಮ ಪ್ರಶ್ನೆ ಕೇಳುತ್ತಿದ್ದೇವೆ. ಪಾಕಿಸ್ತಾನದ ಜತೆ ನಿಕಟ ಬಾಂಧವ್ಯ ಹೊಂದಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ.

ಪಾಕಿಸ್ತಾನಕ್ಕೆ ಹೋಗಿ ಊಟ ಮಾಡಿ ಬಂದವರು ನಾವಲ್ಲ. ರೈಲು, ಬಸ್ ಬಿಟ್ಟವರು ನಾವಲ್ಲ. ಕಾಂಗ್ರೆಸ್ ಸರ್ಕಾರ ಬಂಧಿಸಿದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದರುವ ಬಿಜೆಪಿ ಆಡಳಿತದವರು ಎಂಬುದನ್ನು ಜನ ಮರೆತಿಲ್ಲ ಎಂದರು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೂ ನನ್ನ ವಿರುದ್ಧ ಕೋಮು ದ್ವೇಷದ ರಾಜಕಾರಣ ನಡೆಯುತ್ತಿದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ನಂಬುವುದಿಲ್ಲ ಎಂದು ತಿಳಿಸಿದರು.

Facebook Comments