ಬಳ್ಳಾರಿ ಜಿಲ್ಲೆ ವಿಭಜನೆ ಬೆನ್ನಲ್ಲೇ ಮತ್ತೊಂದು ಜಿಲ್ಲೆ ವಿಭಜನೆಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡುತ್ತಿದ್ದಂತೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ವಿಭಜನೆಗೂ ಒತ್ತಾಯ ಕೇಳಿಬಂದಿದೆ. ರಾಜ್ಯದಲ್ಲಿ ಅತಿ ದೊಡ್ಡ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆಗಳನ್ನು ಆಡಳಿತಾತ್ಮಕವಾಗಿ ವಿಭಜನೆ ಮಾಡಬೇಕು ಎಂದು ಕೆಲವು ತಾಲ್ಲೂಕುಗಳ ಮುಖಂಡರು ಬೇಡಿಕೆ ಮುಂದಿಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆ 12 ತಾಲ್ಲೂಕುಗಳನ್ನು ಹೊಂದಿದೆ. ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಎಂದು ವಿಭಜಿಸುವುದಾದರೆ ಈವರೆಗೂ ಘಟ್ಟದ ಮೇಲಿನವರೇ ಹೆಚ್ಚಿನದಾಗಿ ಸರ್ಕಾರದಲ್ಲಿ ಅಕಾರ ಅನುಭವಿಸಿದ್ದಾರೆ. ಘಟ್ಟದ ಕೆಳಭಾಗದಲ್ಲಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಘಟ್ಟದ ಕೆಳಗಿನ ತಾಲ್ಲೂಕುಗಳನ್ನು ಒಳಗೊಂಡಂತೆ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು. ತಲಾ ಐದು ತಾಲ್ಲೂಕುಗಳನ್ನು ವಿಭಜಿಸಬೇಕು. ಅಗತ್ಯವಾದರೆ ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ತಾಲ್ಲೂಕುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಮನವಿ ಕೇಳಿಬಂದಿದೆ.

ಜಿಲ್ಲೆಯಲ್ಲಿ ಕಾರವಾರ, ಅಂಕೋಲಾ, ಕುಮುಟ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ ಸೇರಿದಂತೆ 12 ತಾಲ್ಲೂಕುಗಳಿವೆ. ಸರಿಸುಮಾರು 10,291ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಗಳ ಪೈಕಿ 5ನೆ ಸ್ಥಾನ ಹೊಂದಿದೆ.

ಗಡಿಭಾಗದ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಸರಿಸುಮಾರು 100ಕಿ.ಮೀ. ಅಂತರವಿದೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜನೆ ಮಾಡಲೇಬೇಕು ಎಂದು ಘಟ್ಟದ ಕೆಳಗಿನ ರಾಜಕೀಯ ನಾಯಕರು ಒತ್ತಡ ಹೇರುತ್ತಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ್, ರಾಯಭಾಗ, ರಾಮದುರ್ಗ, ಸವದತ್ತಿ, ಕಿತ್ತೂರ್, ನಿಪ್ಪಾಣಿ, ಕಾಗವಾಡ, ಮೂಡಲಗಿ ಎಂಬ 14 ತಾಲ್ಲೂಕುಗಳನ್ನು ಹೊಂದಿದೆ. 18 ವಿಧಾನಸಭಾ ಕ್ಷೇತ್ರಗಳಿವೆ. ಭೌಗೋಳಿಕವಾಗಿ 13,415ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. 47.79 ಲಕ್ಷ ಜನಸಂಖ್ಯೆ ಹೊಂದಿದೆ. ಈ ಜಿಲ್ಲೆಯಲ್ಲೂ ಸಾಕಷ್ಟು ದೂರ ದೂರದ ಪ್ರದೇಶಗಳಿದ್ದು, ಆಡಳಿತಾತ್ಮಕವಾಗಿ ವಿಭಜನೆ ಮಾಡಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಕೇಳಿಬಂದಿದೆ.

ಹುಕ್ಕೇರಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಿ ವಿಭಜನೆಯಾಗಬೇಕು ಎಂದು ಕೆಲಕಾಲ ಪ್ರತಿಭಟನೆಯಾಗಿತ್ತು. ಆದರೆ, ರಾಜಕೀಯ ಜಂಜಾಟದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯೇಕ ಜಿಲ್ಲೆಯ ಹೋರಾಟ ತಣ್ಣಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯೇ ಮುನ್ನೆಲೆಗೆ ಬಂದಿತ್ತು. ಈಗ ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ವಿಜಯಪುರ ಪ್ರತ್ಯೇಕಗೊಳ್ಳುತ್ತಿರುವ ಸಂದರ್ಭದಲ್ಲಿ ದೊಡ್ಡ ದೊಡ್ಡ ಜಿಲ್ಲೆಗಳಲ್ಲೂ ವಿಭಜನೆಯ ಬೇಡಿಕೆಗಳು ಕೇಳಿಬಂದಿವೆ.

ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸ್ಥಳೀಯ ನಾಯಕರು ಜಿಲ್ಲೆಯ ರಚನೆಗಾಗಿ ಹೋರಾಟಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಆನಂದ್‍ಸಿಂಗ್ ಅವರಿಗೆ ನೀಡಿದ್ದ ಭರವಸೆ ಈಡೇರಿಸುವ ಸಲುವಾಗಿ ಬಳ್ಳಾರಿ ವಿಭಜನೆ ಮಾಡಿದ್ದಾರೆ. ಇದರ ಹಿಂದೆ ರಾಜಕೀಯ ಹೊರತುಪಡಿಸಿ ಬೇರೆ ಉದ್ದೇಶವಿಲ್ಲ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ದೊಡ್ಡ ದೊಡ್ಡ ಜಿಲ್ಲೆಗಳನ್ನು ವೈಜ್ಞಾನಿಕವಾಗಿ ವಿಭಜಿಸುವಂತೆ ಬೇಡಿಕೆಗಳು ಕೇಳಿಬಂದಿವೆ.

Facebook Comments