ಯುವಿಸಿಇಗೆ ಪೂರ್ಣ ಸ್ವಾಯತ್ತತೆ : ಸರಕಾರಕ್ಕೆ ಶಿಫಾರಸು ಮಾಡಿದ ಸಡಗೋಪನ್ ಸಮಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಪ್ರತಿಷ್ಟಿತ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ) ಅನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಹಾಗೂ ಅದಕ್ಕೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುವಂತೆ ಉನ್ನತ ಮಟ್ಟದ ತಜ್ಞರ ಸಮಿತಿ ರಾಜ್ಯ ಸರಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಸಮಿತಿ ಪರವಾಗಿ ಪ್ರಶಾಂತ ಪ್ರಕಾಶ, ಡಾ.ವೇಣುಗೋಪಾಲ್ ಅವರು 112 ಪುಟಗಳ ಸಮಗ್ರ ವರದಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಸಲ್ಲಿಸಿದರು.

ಯುವಿಸಿಇ ಅನ್ನು ಐಐಟಿ ಮಾದರಿಯ ಉತ್ಕೃಷ್ಟ ಸ್ವಾಯತ್ತ ಸಂಸ್ಥೆಯಾಗಿ ಅಭಿವೃದ್ಧಿ ‌ಮಾಡುವ ಸಂಬಂಧ ಐಐಐಟಿಬಿ ನಿರ್ದೇಶಕ ಡಾ. ಎಸ್. ಸಡಗೋಪನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ. ವೇಣುಗೋಪಾಲ್, ಬಿ. ಮುತ್ತುರಾಮನ್, ಪ್ರಶಾಂತ್ ಪ್ರಕಾಶ್, ಬಿ.ವಿ. ಜಗದೀಶ್, ನಾಗಾನಂದ ದೊರೆಸ್ವಾಮಿ ಇದ್ದರು. ಎರಡು ತಿಂಗಳ ನಿರಂತರ ಅಧ್ಯಯನದ ನಂತರ ಸಮಿತಿಯೂ ಸರಕಾರಕ್ಕೆ ವರದಿ ಸಲ್ಲಿಸಿದೆ.

# ಶಿಫಾರಸುಗಳು ಏನೇನಿವೆ?
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು. ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಆರ್ಥಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯದಲ್ಲಿ ಸಂಪೂರ್ಣ ಸ್ವಾಯತ್ತತೆ:

1. ಆರ್ಥಿಕ ಸ್ವಾಯತ್ತತೆ:
ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸರಕಾರದ ಮೇಲೆ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ಸೂಕ್ತವಾದ ಆರ್ಥಿಕ ಮಾದರಿಯೊಂದನ್ನು ಸಿದ್ಧಪಡಿಸಬೇಕು. ಆಂತರಿಕವಾಗಿ ಹಾಗೂ ಬಾಹ್ಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಅವಕಾಶ ನೀಡಬೇಕು. ದೇಣಿಗೆಗಳ ಸ್ವೀಕಾರ, ಹಳೆಯ ವಿದ್ಯಾರ್ಥಿಗಳಿಂದ ಹಣಕಾಸು ನೆರವು ಪಡೆಯಲು ಅವಕಾಶ ಕಲ್ಪಿಸಬೇಕು ಹಾಗೂ ಬೋಧಕ ಸಿಬ್ಬಂದಿಗೆ ಉತ್ತಮ ವೇತನ, ಟ್ಯೂಷನ್ ಫೀ ನಿಗದಿ ಮಾಡುವ ಅಧಿಕಾರವನ್ನು ಯುವಿಸಿಗೇ ನೀಡಬೇಕು. ಜತೆಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು. ಈ ನಿಟ್ಟಿನಲ್ಲಿ ಆರ್ಥಿಕ ಸ್ವಾಯತ್ತತೆ ಅತ್ಯಂತ ಅಗತ್ಯವೆಂದು ಸಮಿತಿ ಪ್ರತಿಪಾದಿಸಿದೆ.

2. ಶೈಕ್ಷಣಿಕ ಸ್ವಾಯತ್ತತೆ:
ಉತ್ಕೃಷ್ಟ ಶೈಕ್ಷಣಿಕ ಹಿನ್ನೆಲೆಯ ಬೋಧಕರ‌ ನೇಮಕ, ಸಂಶೋಧನೆ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದು, ಹೊಸ ರೀತಿಯ ಪಠ್ಯವನ್ನು ಸೇರ್ಪಡೆಗೊಳಿಸುವ ಹಾಗೂ ಹೊಸ ಕೋರ್ಸುಗಳನ್ನು ಆರಂಭಿಸಲು ಯುವಿಸಿಗೆ ಪೂರ್ಣ ಸ್ವಾಯತ್ತತೆ ಕೊಡಬೇಕು. ಇದರಿಂದ ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದಲ್ಲದೆ, ಉತ್ತಮ ಪ್ರತಿಭಾವಂತರನ್ನು ನಾವು ಪಡೆಯಬಹುದು ಎಂದು ಸಮಿತಿ ಒತ್ತಿ ಹೇಳಿದೆ.

3. ಆಡಳಿತಾತ್ಮಕ ಸ್ವಾಯತ್ತತೆ:
ಆಡಳಿತದಲ್ಲಿ ಯುವಿಸಿಗೆ ಪೂರ್ಣ ಅಧಿಕಾರ ನೀಡುವುದರ ಜತೆಗೆ ಸ್ವತಂತ್ರ ಅಸ್ತಿತ್ವ ನೀಡಬೇಕು. ಒಟ್ಟಾರೆ ಮಾಲೀಕತ್ವ ಸರಕಾರದ್ದೇ ಆಗಿದ್ದರೂ ಆಡಳಿತದಲ್ಲಿ ವಿವಿಯದ್ದೇ ಅಂತಿಮ ನಿರ್ಧಾರವಾಗಬೇಕು. 11 ಸದಸ್ಯರ ಆಡಳಿತ ಮಂಡಳಿಯಲ್ಲಿ ಸರಕಾರಕ್ಕೂ ಸಮಾನ ಪ್ರಾತಿನಿಧ್ಯ ಇರಬೇಕು. ಸರಕಾರ, ಕೈಗಾರಿಕೆ, ಶೈಕ್ಷಣಿಕ ವಲಯದಿಂದ ತಲಾ ಮೂವರು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಇಬ್ಬರು ಸದಸ್ಯರು ಇರಬೇಕು ಎಂದು ಶಿಫಾರಸು ಮಾಡಲಾಗಿದೆ.

# ಅತ್ತ್ಯುತ್ತಮ ಬೋಧನಾ ವರ್ಗ ಮತ್ತು ಅರ್ಹತೆ:

ದೇಶಿಯ ಹಾಗೂ ವಿದೇಶಗಳಿಂದ ಅತ್ತ್ಯುತ್ತಮ ಗುಣಮಟ್ಟದ ಬೋಧನಾ ವರ್ಗವನ್ನು ಹೊಂದುವುದು, ಸಂಶೋಧನೆಗೆ ಒತ್ತು ನೀಡುವುದರ ಜತೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಕೈಗಾರಿಕಾ ವಲಯದ ನಿಪುಣರಿಂದ ಬೋಧನಾ ವ್ಯವಸ್ಥೆ ಮಾಡುವುದು. ಇದರ ಜತೆಗೆ, ಹೊಸ ಪಠ್ಯಗಳನ್ನು ಸೇರ್ಪಡೆ ಮಾಡುವುದೂ ಹಾಗೂ ಹೊಸ ಹೊಸ ಶಾಖೆಗಳನ್ನು ತೆರೆಯುವುದಕ್ಕೂ ವಿವಿಗೆ ಸ್ವಾಯತ್ತತೆ ನೀಡಬೇಕು. ಮೂಲಸೌಕರ್ಯ ಅಭಿವೃದ್ಧಿಗೂ ಸಮಿತಿ ಶಿಫಾರಸು ಮಾಡಿದೆ.

ಇದರ ಜತೆಗೆ ಆರ್ಥಿಕವಾಗಿ ಯುವಿಸಿಇಯನ್ನು ಸದೃಢಗೊಳಿಸುವುದು, ಮುಂದಿನ 10 ವರ್ಷಗಳಲ್ಲಿ ಅದರ ಬಜೆಟ್ ಗಾತ್ರವನ್ನು 700 ಕೋಟಿ ರೂ.ಗಳಿಗೆ ಹಿಗ್ಗಿಸುವುದು ಶಿಫಾರಸುಗಳಲ್ಲಿ ಇರುವ ಪ್ರಮುಖ ಅಂಶ. ಜತೆಗೆ, ಕಾಲಕ್ರಮೇಣ ಶುಲ್ಕದಲ್ಲಿ ಪರಿಷ್ಕರಣೆ ಮಾಡಿ, ಅಂತಿಮವಾಗಿ ಐಐಟಿಗಳಲ್ಲಿ ಸಂಗ್ರಹ ಮಾಡಲಾಗುವಷ್ಟು ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸೇಕು ಎಂದು ಸಮಿತಿ ಹೇಳಿದೆ.

# ಸಂಪುಟದಲ್ಲಿ ಚರ್ಚೆ:
ಸಮಿತಿಯ ವರದಿಯನ್ನು ಸಂಪುಟದ ಮುಂದೆ ಇಟ್ಟು ಚರ್ಚೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಸಮಿತಿಯ ಸದಸ್ಯರಿಗೆ ಭರವಸೆ ನೀಡಿದರಲ್ಲದೆ, ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಹಾಗೂ ಗುಣಮಟ್ಟದ ಬದಲಾವಣೆ ತರಲು ಈಗಾಗಲೇ ಸರಕಾರ ಸಾಕಷ್ಟು ಕೆಲಸ ಮಾಡಿದೆ. ಆ ನಿಟ್ಟಿನಲ್ಲಿ ಸಡಗೋಪನ್ ಅವರ ನೇತೃತ್ವದ ಸಮಿತಿ ನೀಡಿರುವ ವರದಿ ಮಹತ್ವದ್ದು ಎಂಬ ಅಭಿಪ್ರಾಯ ನನ್ನದು ಎಂದರು.

Facebook Comments

Sri Raghav

Admin