ಈ ವಾರ ಕ್ರೆಜಿ ಸ್ಟಾರ್ ಅಭಿನಯದ ‘ಆ ದೃಶ್ಯ’ ಚಿತ್ರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಮತ್ತೊಮ್ಮೆ ದೃಶ್ಯ ವೈಭವ ಗಮನ ಸೆಳೆಯಲಿದೆ. ಹೌದು, ದೃಶ್ಯ ಅಂದಾಕ್ಷಣ ನೆನಪಿಗೆ ಬರುವುದು ಕ್ರೇಜಿಸ್ಟಾರ್ ರವಿಚಂದ್ರನ್.  ಏಕೆಂದರೆ, ದೃಶ್ಯ ಎಂಬ ಚಿತ್ರ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿತ್ತು. ಈಗ ಅದೇ ನಿಟ್ಟಿನಲ್ಲಿ ಆ…ದೃಶ್ಯ ಎಂಬ ಚಿತ್ರ ತೆರೆ ಮೇಲೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಈ ಚಿತ್ರದ ಕೇಂದ್ರ ಬಿಂದು ಕೂಡ ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್ ಅವರೇ.

ಆ ದೃಶ್ಯ ಕೂಡ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಕೊಲೆಯೊಂದರ ಸುತ್ತ ನಡೆಯುವ ಕಥೆ ಇದರಲ್ಲಿದೆ. ಶಿವಗಣೇಶ್ ಅವರ ನಿರ್ದೇಶನದ ನಾಲ್ಕನೇ ಚಿತ್ರವಿದು.ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿದ ಈ ಚಿತ್ರದ ಮೂಲಕ ಪ್ರೇಕ್ಷಕ ಏನನ್ನು ನಿರೀಕ್ಷಿಸಿ ಬರುತ್ತಾರೋ ಅದೆಲ್ಲ ಸಿಗುತ್ತದೆ ಎನ್ನುವ ನಿರ್ಮಾಪಕ ಕೆ.ಮಂಜು 150 ರಿಂದ 160 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಚಿತ್ರವನ್ನು 300 ಥಿಯೇಟರ್‍ಗಳಲ್ಲಿ ಹಾಕುವಂತೆ ಬೇಡಿಕೆ ಬರು ತ್ತಿದೆ. ಆದರೆ ಕೆ.ಮಂಜು ಮಾತ್ರ 110 ಸಿಂಗಲ್ ಸ್ಕ್ರೀನ್ ಹಾಗೂ 50 ಮಲ್ಟಿಫ್ಲೆಕ್ಸ್‍ಗಳಲ್ಲಿ ಮಾತ್ರವೇ ರಿಲೀಸ್ ಮಾಡುತ್ತಿದ್ದಾರೆ.  ಅಲ್ಲದೆ ನವೆಂಬರ್ ಕೆ. ಮಂಜು ಪಾಲಿಗೆ ಅದೃಷ್ಟದ ತಿಂಗಳು. ರಾಜಾಹುಲಿ ಕೂಡ ಇದೇ ತಿಂಗಳು ಬಿಡುಗಡೆಯಾಗಿತ್ತು. ಇಂದು ಚಿತ್ರರಂಗದವರಿಗೆ, ಕಲಾವಿದರಿಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ.

ಈ ಚಿತ್ರ ಮೌತ್ ಪಬ್ಲಿಸಿಟಿಯಿಂದಲೇ ನಿಧಾನವಾಗಿ ಪ್ರಚಾರ ತೆಗೆದುಕೊಳ್ಳುತ್ತದೆ. ನಂತರದಲ್ಲಿ ಥಿಯೇಟರ್ ಹೆಚ್ಚಿಗೆ ಮಾಡಬೇಕು ಎನ್ನುವುದು ಮಂಜು ಅವರ ಅಭಿಪ್ರಾಯ. ನಟ ರವಿಚಂದ್ರನ್ ಮಾತನಾಡಿ, ಈ ಚಿತ್ರದಲ್ಲಿ ನನಗೆ ಎರಡು ಗೆಟಪ್ ಇದೆ. ಮೊಬೈಲ್ ಫೋನ್ ಏನೆಲ್ಲ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಈ ಚಿತ್ರದಲ್ಲಿ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದರು.

ಇನ್ನು ಚಿತ್ರದ ಬಗ್ಗೆ ಒಂದು ಮಾತಿನಲ್ಲಿ ಹೇಳಬೇಕೆಂದರೆ ಒಬ್ಬ ವ್ಯಕ್ತಿಯ ಫೋನ್ 24 ಗಂಟೆಗಳ ಕಾಲ ಸ್ವಿಚ್ ಆಫ್ ಆದಾಗ ಅದರಿಂದ ಏನಾಗಬಹುದು ಎಂದು ಹೇಳುವುದೇ ಚಿತ್ರಕಥೆ. ಒಂದು ಮರ್ಡರ್, ಅದರ ಇನ್‍ವೆಸ್ಟಿಗೇಷನ್ ಸುತ್ತ ನಡೆಯುವ ಕಥೆಯಿದು. ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಎರಡು ಗೆಟಪ್ ಇದ್ದರೂ ಹೀರೋಯಿನ್ ಇಲ್ಲ. ಚಿಕ್ಕಮಗಳೂರು, ಮೂಡಿಗೆರೆ, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ನಟಿಯರಾದ ನಿಸರ್ಗ, ಚೈತ್ರಾ ಆಚಾರ್ ಮಾತನಾಡಿ, ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ವಿಶೇಷ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಎರಡೇ ಹಾಡುಗಳಿದ್ದು ಗೌತಮ್ ಶ್ರೀವತ್ಸ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ವಿನೋದ್ ಭಾರತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ನಿರೀಕ್ಷೆಯಂತೆ ಚಿತ್ರ ಬೆಳ್ಳಿ ಪರದೆ ಮೇಲೆ ದೃಶ್ಯಗಳ ಸರಮಾಲೆಯನ್ನು ಹರಡಲಿದೆಯಂತೆ.

Facebook Comments