“ಸಿಎಂ ಯಡಿಯೂರಪ್ಪ ಈಗ ರಾಜಹುಲಿ ಅಲ್ಲ ರಾಜಾಇಲಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮಯ ಕೊಟ್ಟಿಲ್ಲ. ರಾಜಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಈಗ ಇಲಿಯಂತಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಿಂಬಿಸಲಾಗುತ್ತಿತ್ತು. ಹುಲಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕಿಲ್ಲ. ಬೆಕ್ಕು ಬಂದಾಗ ಇಲಿ ಹೋಗಿ ಬಿಲ ಹುಡುಕುತ್ತದೆಯೋ ಹಾಗೆ ಯಡಿಯೂರಪ್ಪ ಸ್ಥಿತಿಯೂ ಹಾಗಿದೆ ಎಂದರು.

ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೇಳಿದರೆ ಅಮಿತ್ ಶಾ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ಅವರಿಗೆ ಧಮ್ಕಿ ಹಾಕಿದ್ದಾರೆ ಎಂಬ ವದಂತಿಗಳಿವೆ. ಹತ್ತಾರು ಬಾರಿ ಪ್ರಯತ್ನ ಪಟ್ಟರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಕಾಂಗ್ರೆಸ್-ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ ಅನರ್ಹ ಶಾಸಕರ ಉಪ ಚುನಾವಣೆ ವೇಳೆ ಯಡಿಯೂರಪ್ಪ ಫಲಿತಾಂಶ ಬಂದ 24 ಗಂಟೆಯೊಳಗಾಗಿ ಅನರ್ಹರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದರು. ಉಪ ಚುನಾವಣೆಯಲ್ಲಿ ಗೆದ್ದ 12 ಮಂದಿ ಶಾಸಕರು ಹೊಸ ಸೂಟು-ಬೂಟು ಹೊಲೆಸಿಕೊಂಡು ಕಾಯುತ್ತಲೇ ಇದ್ದಾರೆ. 24 ಗಂಟೆಯಲ್ಲ 24 ದಿನ ಕಳೆದರೂ ಇನ್ನೂ ಸಚಿವರಾಗಿಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರದ ನಾಯಕರ ಬಳಿ ಪರಿಹಾರ ಕೇಳುವ ಮತ್ತು ರಾಜಕೀಯ ವಿಷಯ ಕುರಿತು ಚರ್ಚಿಸುವ ಧೈರ್ಯ ಯಡಿಯೂರಪ್ಪ ಅವರಿಗೆ ಇಲ್ಲದಂತಾಗಿದೆ. ಇವರಿಗೆ ಬದ್ಧತೆ, ಆತ್ಮಗೌರವ ಕಳೆದು ಹೋಗಿವೆ. ಮಾತುಕೊಟ್ಟಂತೆ ನಡೆದುಕೊಳ್ಳಲಾಗುತ್ತಿಲ್ಲ ಎಂದು ಜನರ ಬಳಿ ಯಡಿಯೂರಪ್ಪ ಕ್ಷಮೆ ಕೇಳಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಪಕ್ಷ ಬಿಟ್ಟು ನಿಮ್ಮ ಪಕ್ಷ ಸೇರಿ ಉಪ ಚುನಾವಣೆಯಲ್ಲಿ ಗೆದ್ದವರನ್ನು ಮಂತ್ರಿಗಳನ್ನಾಗಿ ಮಾಡಿ, ಇಲ್ಲವೇ ಜನರ ಬಳಿ ಬೇಷರತ್ ಕ್ಷಮೆ ಕೇಳಿ ಎಂದು ಉಗ್ರಪ್ಪ ಒತ್ತಾಯಿಸಿದರು.

ಇಕ್ಕಟ್ಟಿನ ರಾಜಕೀಯದಿಂದ ಉಸಿರಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬೇಸರಗೊಂಡು ಯಡಿಯೂರಪ್ಪ ಅವರು ತಾವಾಗಿಯೇ ರಾಜೀನಾಮೆ ಕೊಟ್ಟು ಹೋಗುವಂತಹ ಸನ್ನಿವೇಶ ಸೃಷ್ಟಿಸಲು ಬಿಜೆಪಿಯ ಒಂದು ಗುಂಪು ಸಂಚು ನಡೆಸಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೇಂದ್ರ ಸರ್ಕಾರ ಕೂಡ ದಿವಾಳಿಯಾಗಿದೆ.

ಕಳೆದ ಐದು ವರ್ಷದಲ್ಲಿ ಹಣ ದುಬ್ಬರ ಶೇ.7.35ಕ್ಕೆ ಜಿಗಿದಿದೆ ಎಂದು ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗಲೂ ಇದೇ ರೀತಿಯ ಸ್ಥಿತಿ ಇತ್ತು. ಎರಡನೇ ಅವಧಿಗೂ ಅದು ಮುಂದುವರೆದಿದೆ. ಅಚ್ಚೇದಿನ್ ಎಂದರೆ ಇದೇನಾ ಎಂದು ಪ್ರಶ್ನಿಸಿದರು.

ಎನ್‍ಆರ್‍ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ನಂತರ ಎಲ್ಲಾ ಭಾಗಗಳಲ್ಲೂ ಸಮಾವೇಶಗಳನ್ನು ನಡೆಸಲಾಗುವುದು. ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ಉಗ್ರಪ್ಪ ತಿಳಿಸಿದರು.

Facebook Comments

Sri Raghav

Admin