ಮಹಾಲಕ್ಷ್ಮಿಲೇಔಟ್‍ನಲ್ಲಿ ಗೋಪಾಲಯ್ಯ ಗೆಲುವು ಶತಸಿದ್ಧ: ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29- ಜಾತಿ-ಮತ, ಬಡವ-ಬಲ್ಲಿದ, ಮೇಲು-ಕೀಳು ನೋಡದೆ ಎಲ್ಲರನ್ನು ಸಮಾನತೆಯಿಂದ ಕಂಡು ಕ್ಷೇತ್ರದ ಮನೆ ಮಗನಾಗಿರುವ ಕೆ.ಗೋಪಾಲಯ್ಯ ಅವರು ಈ ಬಾರಿ ಮಹಾಲಕ್ಷ್ಮಿಲೇಔಟ್‍ನಲ್ಲಿ ನಿರೀಕ್ಷೆಗೂ ಮೀರಿದ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದರು. ನಂದಿನಿಲೇಔಟ್‍ನಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರವಾಗಿ ಮತಯಾಚನೆ ಮಾಡಿದ ಅವರು, ಎರಡು ಅವಧಿಯಲ್ಲಿ ಶಾಸಕರಾಗಿ ಕ್ಷೇತ್ರಾದ್ಯಂತ ಜನಪರವಾದ ಕೆಲಸ ಮಾಡಿದ್ದಾರೆ. ಹೀಗಾಗಿ ಜನರು ಅವರನ್ನೇ ಮತ್ತೆ ಆಯ್ಕೆ ಮಾಡುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಗೋಪಾಲಯ್ಯ ಅವರನ್ನು ಕ್ಷೇತ್ರದ ಜನರು ಮನೆಯ ಮಗನಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಶಾಸಕರಾಗಿದ್ದ ವೇಳೆ ಅವರು ಜನಪರವಾದ ಕೆಲಸ ಮಾಡಿದ್ದಾರೆ ಎಂದರು. ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ, ಬಡವರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಸಹಾಯ ಒದಗಿಸುವುದು, ಮನೆಯಿಲ್ಲದವರಿಗೆ ವಸತಿ, ಕುಡಿಯುವ ನೀರು, ರಸ್ತೆಗಳ ಅಗಲೀಕರಣ ಸೇರಿದಂತೆ ಹಲವಾರು ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಈ ಉಪಚುನಾವಣೆಯಲ್ಲಿ ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದರು.

ಅಭ್ಯರ್ಥಿ ಕೆ.ಗೋಪಾಲಯ್ಯ ಮಾತನಾಡಿ, ನನಗೆ ಕ್ಷೇತ್ರದಲ್ಲಿ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ಸಮುದಾಯದವರು ನಿರೀಕ್ಷೆಗೂ ಮೀರಿದ ಬೆಂಬಲ ಕೊಟ್ಟಿದ್ದಾರೆ. ಜನರ ಬೆಂಬಲ, ಅಭಿಮಾನಿಗಳು, ಕಾರ್ಯಕರ್ತರ ಸಹಕಾರದಿಂದ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರು ಅಭಿವೃದ್ಧಿ ಮಾಡುತ್ತಾರೋ ಅವರನ್ನು ಜನ ಬೆಂಬಲಿಸುತ್ತಾರೆ. ಶಾಸಕನಾಗಿ ಈ ಹಿಂದೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಜನ ಮೆಚ್ಚಿದ್ದಾರೆ. ಈ ಬಾರಿಯೂ ಅವರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಬೆಂಬಲ: ಇನ್ನು ಕೆ.ಗೋಪಾಲಯ್ಯ ಅವರಿಗೆ ಮಹಾಲಕ್ಷ್ಮಿಪುರ ಬ್ರಾಹ್ಮಣ ಸಭಾವು ಬೆಂಬಲ ಸೂಚಿಸಿದೆ. ಈ ಸಂಬಂಧ ಸಭಾದ ಕಾರ್ಯದರ್ಶಿ ಬಿ.ಎಸ್. ರಾಘವೇಂದ್ರ ಭಟ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗೋಪಾಲಯ್ಯ ಅವರಿಗೆ ನಮ್ಮ ಸಮಾಜ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

Facebook Comments