ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳಿಗೆ ಶೀಘ್ರದಲ್ಲೇ ಖಾಯಂ ಹಕ್ಕು ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.1- ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸರ್ಕಾರಿ ಮಾಲೀಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೆ ಶೀಘ್ರದಲ್ಲೇ ಖಾಯಂ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.  ವಿಧಾನಸಭೆಯಲ್ಲಿ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದ ಮೂಲಕ ಈ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗಿದೆ. ಶೀಘ್ರದಲ್ಲೇ ಇವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಉಳಿದಿರುವ ಕಡೆ ಜಾಗ,ರಸ್ತೆ, ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರ ಅಡಿ, ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 1200 ಚದರ ಅಡಿ ಮೀರದಂತೆ ಅಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕು ಪತ್ರ ಕೊಡಲಾಗುವುದು. ಇನ್ನು ಆರು ತಿಂಗಳೊಳಗೆ ಹಕ್ಕುಪತ್ರಗಳನ್ನು ಪೂರ್ಣಗೊಳಿಸುವ ಕಾರ್ಯ ಮುಗಿಯಲಿದೆ. ರಸ್ತೆಗಳ ಮಧ್ಯೆ ಮನೆಗಳನ್ನು ಕಟ್ಟಿದ್ದರೆ ಅವರನ್ನು ಸ್ಥಳಾಂತರಿಸಿ ಮನೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 1200 ಚದರ ಅಡಿಗಳಲ್ಲಿರುವ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ 3000 ರೂ. ಎಸ್ಟಿ-ಎಸ್ಟಿ ವರ್ಗದವರಿಗೆ 1200 ರೂ., ನಗರಸಭೆ ವ್ಯಾಪ್ತಿಯಲ್ಲಿನ 600 ಚದರ ಅಡಿ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ 4 ಸಾವಿರ, ಎಸ್ಟಿ-ಎಸ್ಟಿ ವರ್ಗದವರಿಗೆ 2000 ರೂ. ನಿಗದಿ ಮಾಡಲಾಗಿದೆ.

ಬಿಬಿಎಂಪಿ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ನಿವೇಶನದ ನೋಂದಣಿಗೆ ಸಾಮಾನ್ಯ ವರ್ಗದವರಿಗೆ 10 ಸಾವಿರ, ಎಸ್ಸಿ-ಎಸ್ಟಿ ವರ್ಗದವರಿಗೆ 5000 ರೂ. ನಿಗದಿ ಮಾಡಲಾಗಿದೆ. ಇದಕ್ಕೂ ಮುನ್ನ ಎಲ್ಲ ಪಕ್ಷಗಳ ಸದಸ್ಯರು ಪಕ್ಷಬೇಧ ಮರೆತು ಹಕ್ಕುಪತ್ರ ವಿತರಣೆ ಮಾಡುವಲ್ಲಿ ಆಗುತ್ತಿರುವ ಲೋಪದೋಷಗಳನ್ನು ತೀವ್ರವಾಗಿ ಖಂಡಿಸಿದರು.

Facebook Comments