ಅನುಮೋದನೆಯಾಗದ 65 ಬಡಾವಣೆಗಳಿಗೆ ಘಟನೋತ್ತರ ಮಂಜೂರಾತಿ ಕುರಿತ ಸರ್ಕಾರಿ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆಬ್ರವರಿ 24,2021: ಕರ್ನಾಟಕ ಗೃಹ ಮಂಡಳಿಯ 2000ನೆ ಸಾಲಿನಿಂದ ವಿವಿಧ ವಸತಿ ಕಾರ್ಯಕ್ರಮಗಳ ಅಡಿಯಲ್ಲಿ ಅಭಿವೃದ್ಧಿಪಡಿಸಿ ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ ಆಗದೇ ಇರುವ ಪ್ರಮುಖ 59 ಬಡಾವಣೆಗಳು ಮತ್ತು ಅನುಷ್ಠಾನಗೊಳಿಸಿ ಪೂರ್ಣಗೊಳ್ಳುವ ಹಂತದಲ್ಲಿರುವ 6 ಯೋಜನೆಗಳ ಯಥಾಸ್ಥಿತಿ ನಕ್ಷೆಗಳಿಗೆ ಒಂದು ಬಾರಿಯ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಘಟನೋತ್ತರ ಮಂಜೂರಾತಿ ನೀಡಿದ್ದು, ಈ ಬಗ್ಗೆ ಸರ್ಕಾರಿ ಆದೇಶ ಹೊರ ಬಿದ್ದಿದೆ ಎಂದು ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದ್ದಾರೆ.

2000ನೆ ಸಾಲಿನಿಂದ ಕರ್ನಾಟಕ ಗೃಹ ಮಂಡಳಿಯ ವತಿಯಿಂದ 236 ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ಇವುಗಳಲ್ಲಿ 230 ಯೋಜನೆಗಳು ಪೂರ್ಣಗೊಂಡಿದ್ದು, 6 ಯೋಜನೆಗಳು ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿರುವ ಸಚಿವರು, ಈ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ನಗರಾಭಿವೃದ್ಧಿ ಸಚಿವರೊಂದಿಗೆ ನಿರಂತರವಾಗಿ ಚರ್ಚಿಸಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸತತವಾಗಿ ಸಭೆ ನಡೆಸಿ, ಬಡಾವಣೆ ವಿನ್ಯಾಸಗಳು ನಿಯಮಾವಳಿ ಪ್ರಕಾರ ಇರುವುದನ್ನು ಖಚಿತಪಡಿಸಿಕೊಂಡು ಅನುಮೋದನೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಅದರಂತೆ, ಈ ಪ್ರಸ್ತಾವನೆಯನ್ನು ಕಳೆದ ತಿಂಗಳು (ಜನವರಿi21,2021) ನಡೆದ ಸಚಿವ ಸಂಪುಟದ ಮುಂದೆ ತರಲಾಗಿದ್ದು, ಸಚಿವ ಸಂಪುಟ ತನ್ನ ಅನುಮೋದನೆ ನೀಡಿತ್ತು. ಈ ಸಂಬಂಧದಲ್ಲಿ ದಿನಾಂಕ:23.02.2021ರಂದು ಸರ್ಕಾರಿ ಆದೇಶ ಹೊರಬಿದ್ದಿದೆ ಎಂದೂ ಸಚಿವರು ತಿಳಿಸಿದ್ದಾರೆ. ಬಡವರು ಹಾಗೂ ಮಧ್ಯಮವರ್ಗಗಳ ಜನರಿಗೆ ಸರ್ಕಾರದ ಈ ಐತಿಹಾಸಿಕ ತೀರ್ಮಾನದಿಂದ ಅನುಕೂಲವಾಗಲಿದೆಯೆಂದು ಸಚಿವ ಶ್ರೀ ವಿ.ಸೋಮಣ್ಣನವರು ತಿಳಿಸಿದ್ದಾರೆ.

ಬಡಾವಣೆ ನಕ್ಷೆ ಅನುಮೋದನೆಯಾಗದ ಕಾರಣ ಹಂಚಿಕೆದಾರರಿಗೆ ಇ-ಸ್ವತ್ತು ಪಡೆಯಲು ಹಾಗೂ ಬ್ಯಾಂಕ್ ಸಾಲ ಪಡೆದುಕೊಳ್ಳಲು ಅನಾನುಕೂಲವಾಗಿತ್ತು, ಈ ಸಮಸ್ಯೆ ಈಗ ಬಗೆಹರಿದಿದೆ ಎಂದೂ ಸಚಿವರು ಹೇಳಿದ್ದಾರೆ.

2000ನೇ ಸಾಲಿನಿಂದ ಇಲ್ಲಿಯವರೆಗೆ ಸರ್ಕಾರ ಕರ್ನಾಟಕ ಗೃಹಮಂಡಳಿಯ ಮೂಲಕ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಮೂಲೆ ನಿವೇಶನಗಳನ್ನು ಹೊರತುಪಡಿಸಿ 67,373 ವಸತಿ ನಿವೇಶನ, 12,931 ಮನೆ, 3415 ಫ್ಲಾಟ್ಸ್ (ಅಪಾರ್ಟಮೆಂಟ್) ಗಳನ್ನು ಹಂಚಿಕೆ ಮಾಡಿದಯಲ್ಲದೆ, 6 ಹೊಸ ಬಡಾವಣೆಗಳಲ್ಲಿನ ಸುಮಾರು 8000 ಸ್ವತ್ತುಗಳು ಅಭಿವೃದ್ಧಿ ಹಂತದಲ್ಲಿವೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin