“ಕದ್ದು ಓಡಿ ಹೋಗಿ ಬಾದಾಮಿಯಲ್ಲಿ 100 ವೋಟುಗಳಿಂದ ಗೆದ್ದ ಸಿದ್ದರಾಮಯ್ಯ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.16-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ದು ಓಡಿ ಹೋಗಿ ಬಾದಾಮಿಯಲ್ಲಿ ನಿಂತು 100 ವೋಟುಗಳಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ. ಇವರಿಗೆ ನಾಚಿಕೆಯಾಗಬೇಕು ಎಂದರು.

ಸಿದ್ದರಾಮಯ್ಯ ಅವರ ಮೇಲೆ ಜೆಡಿಎಸ್‍ನವರು, ಜೆಡಿಎಸ್ ಅವರ ಮೇಲೆ ಸಿದ್ದರಾಮಯ್ಯ ದೋಸ್ತಿ ಸರ್ಕಾರದ ಬಗ್ಗೆ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ದೋಸ್ತಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಸರ್ಕಾರದೊಂದಿಗೆ ಕೈ ಜೋಡಿಸಲೇ ಇಲ್ಲ.

ಸಾಲ ಮನ್ನಾ ವಿಷಯಕ್ಕೆ ನೆರವು ನೀಡಲಿಲ್ಲ, ಯಾವ ಅಭಿವೃದ್ಧಿ ಕೆಲಸಗಳಿಗೂ ಸಿದ್ದರಾಮಯ್ಯ ಅವರಿಂದ ನೆರವು ದೊರೆಯಲೇ ಇಲ್ಲ. ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಚನೆಯಾದ ಸಮನ್ವಯ ಸಮಿತಿಗೆ ಸರ್ಕಾರದ ಪಾಲುದಾರಿಕೆ ಪಕ್ಷವಾದ ಜೆಡಿಎಸ್ ಅಧ್ಯಕ್ಷರನ್ನೇ ಬೇಡ ಎಂದಿದ್ದ ಇವರು, ಯಾವ ರೀತಿಯ ಸಹಕಾರ ನೀಡಿದ್ದರು ಎಂಬುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್-ಕಾಂಗ್ರೆಸ್ ಒಟ್ಟಿಗೆ ಸೇರಿ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಗಣ್ಯರೆಲ್ಲ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಯಾವ ಮೂಲೆಯಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮುಂದೆ ನಾನೇ ಸಿಎಂ ಎಂದು ಹೇಳಿ ಚುನಾವಣೆಯಲ್ಲಿ 89 ಸೀಟು ಗಳಿಸಿದ್ದರು. ಅನಂತರ ದೋಸ್ತಿ ಸರ್ಕಾರದ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‍ಗಾಂಧಿ ಪ್ರಧಾನಿ ಎಂದು ಹೇಳಿದ್ದರಿಂದ ಇಡೀ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ನಂತರ ನಾನೇ ಸಿಎಂ ಆಗುತ್ತೇನೆಂದು ಹೇಳಿಕೊಂಡು ಮೈತ್ರಿ ಸರ್ಕಾರ ಆಡಳಿತ ನಡೆಸಲು ಸಹಕಾರ ನೀಡಲಿಲ್ಲ.

ಇದರಿಂದ 17 ಮಂದಿ ರಾಜೀನಾಮೆ ನೀಡಿ ಸರ್ಕಾರ ಉರುಳಿಸಿಬಿಟ್ಟರು. ಹೀಗಿದ್ದು ನಾನೇ ಸಿಎಂ ಎಂದು ಮತ್ತೆ ಹೇಳುತ್ತಿರುವ ಇವರ ಆಶಾವಾದಕ್ಕೆ ಏನ್ನೇನ್ನಬೇಕು ಎಂದು ಪ್ರಶ್ನಿಸಿದರು.
ಈಗ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಸೇರಿರುವ ಅನರ್ಹರ ಬಗ್ಗೆ ಅವರ ಕ್ಷೇತ್ರದ ಜನತೆ ಅವರನ್ನು ಎಂದಿಗೂ ಕೈಬಿಡುವುದಿಲ್ಲ. ಹಾಗಾಗಿ ಅವರೆಲ್ಲರೂ ಜಯಗಳಿಸುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಸೋಮವಾರದಂದು ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ವಿಶ್ವನಾಥ್ ನಾಮಪತ್ರ ಸಲ್ಲಿಸುತ್ತಿದ್ದು, ಅಂದು ನಾನು ಅಲ್ಲಿಗೆ ತೆರಳುತ್ತೇನೆ. ಅನಂತರ ಚುನಾವಣಾ ಪ್ರಚಾರಕಾರ್ಯದಲ್ಲೂ ತೊಡಗಿಕೊಳ್ಳುತ್ತೇನೆ ಎಂದರು.

Facebook Comments