20 ರಾಜ್ಯಗಳಲ್ಲಿ ವಾರದ ಮೂರು ದಿನ ಲಸಿಕಾ ಆಂದೋಲನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.18- ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದಲ್ಲಿ ಮೂರು ದಿನ ಕೊರೊನಾ ಲಸಿಕೆ ಆಂದೋಲನ ನಡೆಸಲು, ಉಳಿದ ರಾಜ್ಯಗಳಲ್ಲಿ ವಾರದಲ್ಲಿ ನಾಲ್ಕು ದಿನ ಲಸಿಕೆ ನೀಡಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಶನಿವಾರದಿಂದ ಆರಂಭವಾಗಿರುವ ಲಸಿಕಾ ಅಂದೋಲನದಲ್ಲಿ ಒಟ್ಟು 2,24,301 ಮಂದಿಗೆ ಲಸಿಕೆ ನೀಡಲಾಗಿದೆ. ಶನಿವಾರ 2,07,229 ಮಂದಿಗೆ, ಭಾನುವಾರ 17,072 ಮಂದಿಗೆ ಲಸಿಕೆ ನೀಡಲಾಗಿದೆ.

ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಲಸಿಕೆ ಪಡೆದವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದಕ್ಕೆ ಪ್ರಮುಖ ಕಾರಣ ಭಾನುವಾರ ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ತಮಿಳುನಾಡಿನಆರು ರಾಜ್ಯಗಳಲ್ಲಿ ಮಾತ್ರ ಲಸಿಕೆ ಆಂದೋಲನನಡೆದಿದೆ.

ಅದರಲ್ಲೂ ವಾರದ ಕೊನೆಯ ದಿನವಾಗಿದ್ದರಿಂದ ಲಸಿಕೆ ಪಡೆಯಲು ಬಂದವರ ಸಂಖ್ಯೆ ಕೂಡ ಕ್ಷೀಣವಾಗಿದೆ. ಶನಿವಾರ ಶೇ.80ರಷ್ಟು ಲಸಿಕೆ ನೀಡಲಾಗಿತ್ತು. ಏಕಕಾಲದಲ್ಲಿ ಎಲ್ಲಾ ರಾಜ್ಯಗಳು ಲಸಿಕೆ ನೀಡುವ ಬದಲಾಗಿ ವಾರದಲ್ಲಿ ಮೂರು ಮತ್ತು ನಾಲ್ಕು ದಿನ ಲಸಿಕೆ ಆಂದೋಲನ ನಡೆಸಲು ಸರ್ಕಾರ ಮುಂದಾಗಿದೆ.

ಅದರ ಪ್ರಕಾರ ಬಿಹಾರ, ಅಸ್ಸೋಂ, ಗುಜರಾತ್, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ್, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೆರಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದಲ್ಲಿ ಮೂರು ದಿನ. ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಗೋವಾ ರಾಜ್ಯಗಳಲಿ ವಾರದಲ್ಲಿ ಎರಡು ದಿನ, ಆಂಧ್ರಪ್ರದೇಶದಲ್ಲಿ ವಾರದಲ್ಲಿ ಆರು ದಿನ ಲಸಿಕೆ ನೀಡಲು ನಿರ್ಧರಿಸಲಾಗಿದೆ.

Facebook Comments