ಲಸಿಕೆ ನೀಡಿಕೆ ಗುರಿ ಸಾಧಿಸಲು ಸಚಿವ ಸುಧಾಕರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಇದೇ 28ರೊಳಗೆ ಕೋವಿಡ್ ಲಸಿಕೆ ವಿತರಣೆ ಮಾಡುವ ನಿಗದಿತ ಗುರಿಯನ್ನು ಸಾಧಿಸಲೇಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯ ನಿರ್ವಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಲವು ಜಿಲ್ಲೆಗಳು ನಿಗದಿತ ಗುರಿ ಸಾಧಿಸಿದ್ದರೆ, ಇನ್ನು ಕೆಲವು ಜಿಲ್ಲೆಗಳು ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದರೂ ಕೆಲವರು ಉದಾಸೀನ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ಹಂತದ ಲಸಿಕೆಯಲ್ಲಿ ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ಧಿ, ಗೃಹ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಗೂ ಫ್ರಂಟ್‍ಲೈನ್ ವಾರಿಯರ್ಸ್‍ಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿತ್ತು.

ಒಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 4,24,539 ಸಿಬ್ಬಂದಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಕೆಲವರು ಲಸಿಕೆ ಹಾಕಿಸಿಕೊಂಡಿಲ್ಲ ಎಂದು ತಿಳಿಸಿದರು. ಈವರೆಗೆ 1,11,000 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೆಲವರು ಎರಡೆರಡು ಕಡೆ ಹೆಸರು ನೋಂದಣಿ ಮಾಡಿಕೊಂಡಿದ್ದರಿಂದ ಒಟ್ಟು ಸಂಖ್ಯೆ ಕಡಿಮೆಯಾಗಲಿದೆ. ಕೂಡಲೇ ಎಲ್ಲರೂ ಲಸಿಕೆಯನ್ನು ಪಡೆಯಬೇಕು ಎಂದು ಸೂಚನೆ ಕೊಟ್ಟರು.

ವಿಶೇಷವಾಗಿ ಫ್ರಂಟ್‍ಲೈನ್ ವರ್ಕರ್ಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಶೇ.80ರಿಂದ 90ರಷ್ಟು ಗುರಿ ಸಾಧನೆ ಮಾಡಬೇಕೆಂಬ ಸೂಚನೆ ಕೊಡಲಾಗಿದೆ. 22, 23, 24ರಂದು ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗಿದೆ. ಇಲ್ಲೂ ಕೂಡ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪಡೆಯಲಾಗಿದೆ. ವಿಶೇಷವಾಗಿ ಬೆಂಗಳೂರುನಗರ, ಬಾಗಲಕೋಟೆ, ದಾವಣಗೆರೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದರು.

ಚಿಕ್ಕಬಳ್ಳಾಪುರ ಶೇ.70, ಉತ್ತರಕನ್ನಡ ಶೇ.73, ಚಾಮರಾಜನಗರ 70, ಚಿಕ್ಕಮಗಳೂರು ಶೇ.70, ಗುರಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ನಾವು ನಿಗದಿತ ಸಮಯದೊಳಗೆ ಶೇ.80ರಷ್ಟು 90ರಷ್ಟು ಗುರಿ ತಲುಪಬೇಕಿತ್ತು. ಆದರೂ ಇಷ್ಟೆಲ್ಲ ಜಾಗೃತಿ ಮೂಡಿಸಿದರೂ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದು ಅತ್ಯಂತ ಬೇಸರದ ಸಂಗತಿ.

ಲಸಿಕೆ ಹಾಕಿಸಿಕೊಂಡರೆ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಮೀನಾಮೇಷ ಏಕೆ ಎಂದು ಪ್ರಶ್ನಿಸಿದರು. ಲಸಿಕೆ ಪಡೆಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಸೋಂಕದಂತೆ ಆರೋಗ್ಯದಿಂದಿರಬಹುದು. ಆದರೂ ಕೆಲವರು ಲಸಿಕೆಯನ್ನು ಪಡೆಯುತ್ತಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದರು.

Facebook Comments