BIG NEWS : ಶಾಲೆಯಲ್ಲೇ ಮಕ್ಕಳಿಗೆ ಕೊರೋನಾ ಲಸಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಗಬೆಂಗಳೂರು, ಅ.18- ಇದೇ 21ರಿಂದ 1 ರಿಂದ 5ನೆ ತರಗತಿವರೆಗಿನ ಶಾಲೆಗಳು ಆರಂಭವಾಗಲಿದ್ದು, ಶಾಲೆಯಲ್ಲೇ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ತಜ್ಞರ ಸಲಹೆ ಪಡೆದು ಶಾಲೆ ಆರಂಭಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇಂದು ಸಂಜೆ ವೇಳೆಗೆ ತಾಂತ್ರಿಕ ಸಲಹಾ ಸಮಿತಿ ವರದಿ ಕೈ ಸೇರಲಿದ್ದು, ನಂತರ ಶಾಲೆ ಆರಂಭ ಮಾಡಲಾಗುವುದು ಎಂದು ಅವರು ಹೇಳಿದರು.

ಒಂದೇ ಹಂತದಲ್ಲಿ ರಾಜ್ಯದ ಎಲ್ಲ ಶಾಲೆಗಳನ್ನೂ ತೆರೆಯಲಾಗುವುದು. ಆರಂಭದಲ್ಲಿ ಮಧ್ಯಾಹ್ನದವರೆಗೂ ಮಾತ್ರ ಶಾಲೆ ನಡೆಸಿ ಪರಿಸ್ಥಿತಿ ನೋಡಿಕೊಂಡು ಪೂರ್ಣಾವಧಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಶಾಲೆ ಆರಂಭದ ಬೆನ್ನಲ್ಲೇ ಮಕ್ಕಳಿಗೆ ಲಸಿಕೆ ಸಿಗುತ್ತಿರುವುದು ಸಿಹಿ ಸುದ್ದಿ. ಶಾಲೆ ಆರಂಭದ ವೇಳೆಗೆ ಮಕ್ಕಳ ಲಸಿಕೆ ಲಭಿಸಿದರೆ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಕೆಲ ಏಕೋಪಾಧ್ಯಾಯ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಮೊದಲು ಮಕ್ಕಳ ಸಂಖ್ಯೆ ಹೆಚ್ಚಳ ಮಾಡಲು ಆದ್ಯತೆ ನೀಡಿ ಆನಂತರ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡಲು ಗಮನ ಹರಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದೇ 21ರಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿರುವುದು ಉತ್ತಮ ನಡೆ ಎಂದು ಶಿಕ್ಷಣ ತಜ್ಞ ಸುಪ್ರೀತ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದರು. ಮತ್ತಷ್ಟು ದಿನ ಅವರು ಶಿಕ್ಷಣದಿಂದ ಹೊರಗುಳಿದರೆ ಬಾಲ ಕಾರ್ಮಿಕರಾಗುವ ಸಾಧ್ಯತೆ ಇರುವುದರಿಂದ ಶೀಘ್ರ ಶಾಲೆ ಆರಂಭಿಸಬೇಕು. ಇದರಿಂದ ಪೋಷಕರ ಆತಂಕವೂ ನಿವಾರಣೆಯಾಗಲಿದೆ ಎಂದರು.

Facebook Comments