ಮೂರು ಹಂತಗಳಲ್ಲಿ ಕೊರೊನಾ ಲಸಿಕೆ ಹಂಚಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.6- ಸಂಕ್ರಾಂತಿಗೂ ಮುನ್ನಾ ಲಸಿಕೆ ಆಂದೋಲನಕ್ಕೆ ಚಾಲನೆ ನೀಡುವ ಸುಳಿವು ದೊರೆಯುತ್ತಿದ್ದಂತೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ತಯಾರಿ ನಡೆಸಿದ್ದು, ಮೂರು ಹಂತದಲ್ಲಿ ಲಸಿಕೆ ನೀಡಲು ಸಿದ್ದತೆ ಕೈಗೊಂಡಿದೆ. ಮೊದಲ ಹಂತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್‍ಗಳು ಹಾಗೂ ಪ್ರಯೋಗಾಲಯ ಸಿಬ್ಬಂದಿಗಳಿಗೆ. ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ಮಾಡುವ ಪೋಲೀಸರು, ಗೃಹ ರಕ್ಷಕ ದಳ, ನಾಗರಿಕ ರಕ್ಷಣಾ ಪಡೆ ಹಾಗೂ ಸ್ವಚ್ಛತಾ ಕೆಲಸಗಾರರಿಗೆ ಮತ್ತು ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ತಯಾರಿ ನಡೆದಿದೆ.

ಮೊದಲ ಹಂತದಲ್ಲಿ 2,73,211 ಸರ್ಕಾರಿ, 3,57,315 ಮಂದಿ ಖಾಸಗಿ ಸೇರಿ 6,30,524 ಆರೋಗ್ಯ ಕಾರ್ಯಕರ್ತರಿಗೆ ರಾಜ್ಯದಲ್ಲಿ ಲಸಿಕೆ ನೀಡಲಾಗುತ್ತದೆ.  ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಕೋವಿಡ್ ಸೋಂಕಿನ ವಿರುದ್ಧ ನಿರ್ಣಾಯಕ ಹೋರಾಟಕ್ಕಿಳಿದಿರುವ ಸರ್ಕಾರ ಮೊದಲ ಹಂತದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ. ಅದರ ಪರಿಣಾಮ ಆಧರಿಸಿ ತಿಂಗಳಾಂತ್ಯದ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಲಭ್ಯವಾಗುವಂತೆ ಮಾಡುವ ಚಿಂತನೆ ನಡೆಸಿದೆ.

ಸರ್ಕಾರ ನಡೆಸುವ ಲಸಿಕಾ ಆಂದೋಲನದಲ್ಲಿ ಯಾವುದೇ ಅಡ್ಡಪರಿಣಾಮಗಳು ಆಗದೇ ಹೋದರೆ ಮುಂದಿನ ಹಂತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಷರತ್ತುಬದ್ದ ಅನುಮತಿಯೊಂದಿಗೆ ಲಸಿಕೆ ಪೂರೈಸುವ ಸಾಧ್ಯತೆ ಇದೆ.  ನಿರೀಕ್ಷೆಯಂತೆ ಎಲ್ಲವೂ ನಡೆದರೆ ಬಹುತೇಕ ಮಾರ್ಚ್ ವೇಳೆಗೆ ರಾಜ್ಯದಲ್ಲಿ ಲಸಿಕೆ ಸಾರ್ವತ್ರಿಕರಣಗೊಂಡು ಕೊರೊನಾ ಕುರಿತು ಭಯ ಮುಕ್ತಗೊಳ್ಳಬಹುದು.

ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಈಗಲೂ ಕೆಲವು ಅನುಮಾನಗಳಿದ್ದು, ಗೊಂದಲಕಾರಿ ಪರಿಸ್ಥಿತಿ ಇದೆ. ಲಸಿಕೆ ಸುರಕ್ಷಿತ ಎಂದು ಕೇಂದ್ರ ಔಷಧ ನಿಯಂತ್ರಕರ ಪ್ರಾಧಿಕಾರ ಗಂಟಾಘೋಷವಾಗಿ ಹೇಳಿದ್ದರೂ ಕೂಡ ಭಾರತದಲ್ಲಿ ಲಸಿಕಾ ಉತ್ಪಾದಕ ಸಂಸ್ಥೆಗಳಾದ ಸೆರಂ ಮತ್ತು ಭಾರತ್ ಬಯೋಟೆಕ್ ನಡುವಿನ ಕೆಸರೆರಚಾಟ ಗೊಂದಲಗಳಿಗೆ ಮತ್ತಷ್ಟು ಪುಷ್ಠಿ ನೀಡಿವೆ.

ಈ ಎರಡೂ ಕಂಪೆನಿಗಳು ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿಕೊಳ್ಳುವ ಭರದಲ್ಲಿ ಮತ್ತೊಂದು ಕಂಪೆನಿಯ ಲಸಿಕೆ ಮೇಲೆ ಅನುಮಾನ ಹುಟ್ಟುವಂತೆ ಹೇಳಿಕೆ ನೀಡಿವೆ. ನಿನ್ನೆ ಮಧ್ಯಾಹ್ನದವರೆಗೂ ಲಸಿಕೆಯ ಗುಣಮಟ್ಟದ ಸಂಘರ್ಷ ಮುಂದುವರೆದಿತ್ತು. ಇದ್ದಕ್ಕಿದ್ದಂತೆ ಸೆರಂನ ಸಿಇಒ ಆಧಾರ್‍ಪುನಾವಾಲ ಟ್ವಿಟ್ ಮಾಡಿ ಎರಡು ಕಂಪೆನಿಗಳು ಶೀಘ್ರದಲ್ಲೇ ಜಂಟಿ ಹೇಳಿಕೆಯ ಮೂಲಕ ಗೊಂದಲಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಆದರೆ, ಈಗಾಗಲೇ ಸಾರ್ವಜನಿಕರ ಮನಸ್ಸಿನಲ್ಲಿ ಬಿತ್ತಿರುವ ಭೀತಿ ಬಲವಾಗಿದ್ದು, ಅದನ್ನು ಬಗೆಹರಿಸುವ ಸಲುವಾಗಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸರ್ಕಾರ ನಿರ್ಧಾರಿಸಿದೆ. ಲಸಿಕೆ ನೀಡಿದ ಬಳಿಕ ಅವರ ಮೇಲೆ ತೀವ್ರ ನಿಗಾವಹಿಸಿ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸುವ ಮೂಲಕ ಸುರಕ್ಷತೆಯನ್ನು ಮತ್ತೊಮ್ಮೆ ಖಾತರಿಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಪೋರ್ಚುಗಲ್‍ನಲ್ಲಿ ಪೈಜರ್ ಲಸಿಕೆ ಪಡೆದ ನರ್ಸ್ ಒಬ್ಬರು ಎರಡು ದಿನಗಳ ಬಳಿಕ ಮೃತಪಟ್ಟಿರುವುದು ಒಂದಷ್ಟು ಆತಂಕಗಳನ್ನು ಹುಟ್ಟುಹಾಕಿದೆ. ಲಸಿಕೆ ಪಡೆದ ಸೋನಿಯಾ ಅಸೆವೇಡೊ ಅವರ ಸಾವಿಗೆ ಈವರೆಗೂ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಆದರೆ, ದೇಶದಲ್ಲಿ ತಯಾರಾಗಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದು, ಕ್ಲಿನಿಕಲ್ ಟ್ರಯಲ್‍ನಲ್ಲಿ ಸಂಪೂರ್ಣ ಸುರಕ್ಷಿತ ಎಂಬ ಫಲಿತಾಂಶ ಬಂದಿದೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪದೇ ಪದೇ ಸ್ಪಷ್ಟಪಡಿಸುತ್ತಿದೆ.

ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯನ್ಸ್ ಉಷ್ಣಾಂಶದಲ್ಲಿ ಶೇಖರಣೆ ಮಾಡಬೇಕಾಗಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಣಿಕೆಗೆ ಸುರಕ್ಷಿತವಾದ ವಾಹನಗಳು, ದಾಸ್ತಾನು ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಸಮರೋಪಾದಿಯಲ್ಲಿ ಸರ್ಕಾರ ಸಿದ್ಧತೆ ಕೈಗೊಂಡಿದ್ದು, ಸಾರ್ವಜನಿಕರಲ್ಲಿ ದಿನೇ ದಿನೇ ಕುತೂಹಲ ಹೆಚ್ಚಿಸಿದೆ.

Facebook Comments