ಬೆಂಗಳೂರಿಗೆ ಬಂತು ಮೊದಲ ಕಂತಿನ 7.95 ಲಕ್ಷ ಕೊರೊನಾ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.12- ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಲು ಮೊದಲ ಕಂತಿನ 7.95 ಲಕ್ಷ ವಯಲ್ ಬೆಂಗಳೂರಿಗೆ ಬಂದು ತಲುಪಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಆನಂದ್‍ರಾವ್ ವೃತ್ತದ ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಈ ಲಸಿಕೆಗಳನ್ನು ದಾಸ್ತಾನು ಮಾಡಲಾಗುವುದು. ಒಂದು ವಯಲ್‍ನಲ್ಲಿ 5 ಎಂಎಲ್ ಇರಲಿದ್ದು, 0.5 ಎಂಎಲ್‍ನಂತೆ 10 ಜನರಿಗೆ ಲಸಿಕೆ ನೀಡಲು ಒಂದು ವಯಲ್‍ನ್ನು ಬಳಸಲಾಗುತ್ತದೆ ಎಂದರು.

13.90 ಲಕ್ಷ ಲಸಿಕೆ ಬರಬೇಕಾಗಿದ್ದು, ಅದನ್ನು ಕೂಡ ನಂತರ ತಿಳಿಸಲಾಗುವುದು. ಮುಖ್ಯಮಂತ್ರಿಯವರು ಲಸಿಕೆ ಹಂಚಿಕೆ ಪಾರದರ್ಶಕವಾಗಿರುವಂತೆ ಸೂಚಿಸಿದ್ದು, ಅದರಂತೆ ಕೇಂದ್ರ ಮಾರ್ಗಸೂಚಿಯಂತೆ ಶಿಷ್ಟಾಚಾರ ಪಾಲನೆ ಮಾಡುವ ಮೂಲಕ ಮೊದಲು ಆರೋಗ್ಯ ಸೇವೆಯಲ್ಲಿ ತೊಡಗಿರುವವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ವೈಜ್ಞಾನಿಕ ರೀತಿಯಲ್ಲಿ ಲಸಿಕೆ ದಾಸ್ತಾನು ಮತ್ತು ವಿತರಣೆ ಮಾಡಲಾಗುವುದು. ಲಸಿಕೆ ಬಗ್ಗೆ ಭಯ ಅಥವಾ ಆತಂಕಕ್ಕೆ ಯಾರೂ ಒಳಗಾಗಬೇಕಿಲ್ಲ. ಇದು ಸುರಕ್ಷಿತ ಎಂಬುದು ಕ್ಲಿನಿಕಲ್ ಟ್ರಯಲ್‍ನಲ್ಲಿ ದೃಢಪಟ್ಟಿದೆ ಎಂದು ತಿಳಿಸಿದರು. ಮೊದಲ ಡೋಸ್ ತೆಗೆದುಕೊಂಡ 28 ದಿನಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು. ಇದರಿಂದ ಜನರ ಇಮ್ಯುನಿಟಿ ಹೆಚ್ಚುತ್ತದೆ ಎಂದರು.

ಡಿಸಿಜಿಐ ಕೋವಿಶೀಲ್ಡ್ ಗೆ ಅನುಮತಿ ನೀಡಲಾಗಿದೆ. ಈ ಹಿನ್ನಲೆ ಕೇಂದ್ರ 1.1 ಕೋಟಿ ಡೋಸ್ ಖರೀದಿ ಮಾಡಿದೆ. ಪ್ರತೀ ಡೋಸ್‍ಗೆ 210 ರೂ. ತಗುಲಿದೆ. ಇಷ್ಟು ಕಡಿಮೆ ಮೊತ್ತದ ಕೋವಿಡ್ ವ್ಯಾಕ್ಸಿನ್ ವಿಶ್ವದಲ್ಲೇ ಇಲ್ಲ ಎಂದರು.  ಈ ಲಸಿಕೆ ಮಾರಾಟಕ್ಕಲ್ಲ ಎಂಬುದು ಸ್ಪಷ್ಟವಾಗಿ ತಿಳಿಸಲಾಗಿದೆ. ಎಲ್ಲವೂ ಬಹಳ ಶಿಷ್ಟಾಚಾರದಂತೆ ನಡೆಯುತ್ತದೆ. ಲಸಿಕೆ ಪಡೆದವರಿಗೆ ಸಣ್ಣ ಅಡ್ಡ ಪರಿಣಾಮವಾದರೂ ಅದನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇಲ್ಲಿವರೆಗೆ ಈ ಲಸಿಕೆ ಸಂಪೂರ್ಣ ಸುರಕ್ಷಿತವಾದುದಾಗಿದೆ.

ವ್ಯಾಕ್ಸಿನ್ ನ ಮೊದಲ ಆಧ್ಯತೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೊರೋನಾ ಪಾಸಿಟಿವ್ ಇರುವವರು ಹಾಗೂ 50 ವರ್ಷದ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.

Facebook Comments