ಲಸಿಕೆ ಅಭಿಯಾನದಲ್ಲಿ ಸರ್ಕಾರದ ಮತ್ತೊಂದು ಮಹಾ ಎಡವಟ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಹದಿನೆಂಟು ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಗುರುತಿಸಿರುವ ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರಲ್ಲಿ ಖೈದಿಗಳು ಸೇರ್ಪಡೆಯಾಗಿರುವುದು, ರೈತರು, ಶಿಕ್ಷಕರು, ವಿದ್ಯಾರ್ಥಿಗಳು ಸೇರ್ಪಡೆಯಾಗದೆ ಇರುವುದು ವಿವಾದಕ್ಕೆ ಕಾರಣವಾಗಿದೆ.

21 ದಿನಗಳ ಬಳಿಕ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ನಾಳೆಯಿಂದ ಆರಂಭಿಸುವುದಾಗಿ ರಾಜ್ಯ ಸರ್ಕಾರ ನಿನ್ನೆ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದರಲ್ಲಿ 22 ವರ್ಗಗಳ ಜನರನ್ನು ಕೊರೊನಾ ಮುಂಚೂಣಿ ಹೋರಾಟಗಾರರೆಂದು ಗುರುತಿಸಲಾಗಿದೆ.

ಅದರಲ್ಲಿ ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಹಾರೈಕೆದಾರರಿಗೆ ಆದ್ಯತೆ ನೀಡಲಾಗಿದೆ. ಉಳಿದಂತೆ ಖೈದಿಗಳು, ಚಿತಾಗಾರ, ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು, ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಕೋವಿಡ್ ಕರ್ವತ್ಯಕ್ಕೆ ನಿಯೋಜಿತ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ, ಕ್ಯಾಬ್ ಚಾಲಕರು, ವಿದ್ಯುತ್, ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿ,

ಬೀದಿ ಬದಿಯ ವ್ಯಾಪಾರಿಗಳು, ಭದ್ರತೆ ಮತ್ತು ಕಚೇರಿ ಹೌಸ್ ಕಿಪಿಂಗ್ ಸಿಬ್ಬಂದಿಗಳು, ನ್ಯಾಯಾಂಗದ ಅಧಿಕಾರಿಗಳು, ಅನಾರೋಗ್ಯ ಮತ್ತು ವಯೋವೃದ್ಧರ ಹಾರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು,ಮಕ್ಕಳ ಅಭಿವೃದ್ಧಿ ಇಲಾಖೆಯವರು, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಡ್ರಿ ಮತ್ತು ಗ್ಯಾಸ್ ಸರಬರಾಜುದಾರರು, ಪೆಟ್ರೋಲ್ ಬಂಕ್,

ಕರ್ಮಾಚಾರಿಗಳನ್ನು ಒಳಗೊಂಡು, ಔಷಧಿ ತಯಾರಿಸುವ ಸಿಬ್ಬಂದಿ, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿ, ವೈದ್ಯಕೀಯ ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರದ ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು, ಭಾರತೀಯ ಆಹಾರ ನಿಗಮದ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆಲಸಗಾರರನ್ನು ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾಗಿದೆ.

ಪ್ರಮುಖವಾಗಿ ಕೃಷಿ ಸಮುದಾಯವನ್ನು ಕಡೆಗಣಿಸಲಾಗಿದೆ. ಕೊರೊನಾ ಕೆಲಸಕ್ಕೆ ನಿಯೋಜಿತರಾದ ಶಿಕ್ಷಕರನ್ನು ಮಾತ್ರ ಪರಿಗಣಿಸಲಾಗಿದ್ದು, ಪಾಠ ಹೇಳುವ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರು, ಅಥಿತಿ ಶಿಕ್ಷಕರು, ಉಪನ್ಯಾಸಕರನ್ನು ಮಂಚೂಣಿ ಕಾರ್ಯಕರ್ತರೆಂದು ಪರಿಗಣಿಸಲಾಗಿಲ್ಲ. ವಿದ್ಯಾರ್ಥಿಗಳನ್ನು ಕೂಡ ಕೈ ಬಿಡಲಾಗಿದೆ.

ಸದ್ಯಕ್ಕೆ ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿಗಳನ್ನು ಪರಿಗಣಿಸಿಲ್ಲ ಎಂಬ ಸಮರ್ಥನೆ ಕೇಳಿ ಬರುತ್ತಿದೆ. ಆದರೆ ರೈತರನ್ನು ಕೈ ಬಿಟ್ಟಿರುವುದಕ್ಕೆ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.

ಸರ್ಕಾರ ಗುರುತಿಸಿ ಮುಂಚೂಣಿ ಕಾರ್ಯಕರ್ತರ ವಿಭಾಗದಲ್ಲಿರುವ 18ರಿಂದ 44 ವರ್ಷ ವಯೋ ಮಾನದವರಿಗೆ ನಾಳೆಯಿಂದ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತದೆ.

Facebook Comments