“ರಾಜೀನಾಮೆ ಕೊಟ್ಟು ಹೋಗ್ತೀನಿ ಅಷ್ಟೇ” : ವೇದಿಕೆಯಲ್ಲೇ ಸಿಟ್ಟಾದ ಸಿಎಂ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಯಾರಾದರೂ ನನ್ನ ಮೇಲೆ ಒತ್ತಡ ಹಾಕಿದರೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸುತ್ತೇನೆಂದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಎಚ್ಚಸಿದ್ದಾರೆ. ಒಂದೆಡೆ, ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರ ವರಿಷ್ಠರು ಮೀನಾಮೇಷ ಎಣಿಸುತ್ತಿರುವ ಬೆನ್ನಲ್ಲೇ ,ತಮ್ಮನ್ನು ಕಡೆಗಣಿಸಿದರೆ,ಕೈ ಕಟ್ಟಿ ಕೂರುವುದಿಲ್ಲ ಎಂದು ಯಡಿಯೂರಪ್ಪ ದೆಹಲಿ ವರಿಷ್ಟರು ಹಾಗೂ ಪಕ್ಷದ ನಾಯಕರಿಗೂ ನೇರವಾಗಿಯೇ ಸಂದೇಶ ರವಾನಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರದ ಹಣಗವಾಡಿಯಲ್ಲಿ ನಡೆದ ಪಂಚಮಸಾಲಿ ಕಾರ್ಯಕ್ರಮದಲ್ಲಿ ತಮ್ಮ ಸಮುದಾಯಕ್ಕೆ ಮೂವರು ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ವಚನಾನಂದ ಶ್ರೀಗಳು ಆಗ್ರಹ ಮಾಡಿದರು. ಪಂಚಮಸಾಲಿ ಸಮುದಾಯ ನಿಮ್ಮ ಬೆಂಬಲಕ್ಕೆ ನಿಂತಿದ್ದು, ಕಡೆ ಪಕ್ಷ ಮೂವರು ಶಾಸಕರಿಗೆ ನಿಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ, ನೀವು ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಲೇ ಬೇಕು.ಸಚಿವ ಸ್ಥಾನ ನೀಡದೆ ಹೋದರೆ ಸಮಾಜದಿಂದ ವಿರೋಧ ವ್ಯಕ್ತವಾಗುತ್ತೆ ಎಂದು ಅಸಮಾಧಾನ ಹೊರಹಾಕಿದರು. ಇದರಿಂದಾಗಿ ಇರುಸುಮುರುಸಿಗೆ ಒಳಗಾದ ಯಡಿಯೂರಪ್ಪ, ನೀವು ಈ ರೀತಿ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿ ವಚನಾನಂದ ಸ್ವಾಮೀಜಿ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದರು. ನೀವು ನನಗೆ ಬೇದರಿಸಬೇಡಿ ಸ್ವಾಮೀಜಿ ಎಂದು ವಚನಾನಂದ ಸ್ವಾಮೀಜಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದಲೇ ಹೊರ ಹೋಗಲು ಮುಂದಾದರು. ಇದರಿಂದಾಗಿ ಸಭೆಯಲ್ಲಿ ಕೆಲ ಕಾಲ ಗೊಂದಲದ ಪರಿಸ್ಥಿತಿ ಉಂಟಾಯಿತು.

ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ನಾನು ಮೂರು ವರ್ಷ ಹೇಗೆ ಆಡಳಿತ ನಡೆಸಬೇಕೆಂಬ ಸಲಹೆ ಕೊಡಿ. ಆ ಬಳಿಕ ನನ್ನಿಂದ ಇದು ಸಾಧ್ಯವಾಗದಿದ್ದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ನಿಮ್ಮ ಸಲಹೆ ನೀಡಿದಂತೆ ಕೆಲಸ ಮಾಡುತ್ತೇನೆ. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಮೂರು ವರ್ಷಗಳ ಕಾಲ ಹೇಗೆ ಆಡಳಿತ ನಡೆಸಬೇಕೆಂಬ ಬಗ್ಗೆ ಎಲ್ಲಾ ಸಮಾಜದ ಸ್ವಾಮೀಜಿಗಳು ಸಲಹೆ ನೀಡಲಿ. ನನ್ನ ಮೇಲೆ ಒತ್ತಡ ಹಾಕಿದರೆ ಹೇಗೆ.? ಬನ್ನಿ ಕುಳಿತುಕೊಂಡು ಮಾತುಕತೆ ನಡೆಸೋಣ. ಆಮೇಲೆ ಒಂದು ತೀರ್ಮಾನಕ್ಕೆ ಬರೋಣ ಎಂದು ತಿಳಿಸಿದರು.

ನೀವು ಹೇಳಿದ ಹಾಗೆ ತಲೆ ಬಾಗಿ ನಡೆಯುತ್ತೇನೆ. ಪಂಚಮಸಾಲಿ ಸಮಾಜ ಇಲ್ಲದೇ ನಾನಿಲ್ಲ.‌ ನನ್ನ ಪರಿಸ್ಥಿತಿ ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ ಯಡಿಯೂರಪ್ಪ, ನಾನು ಪಂಚಮಸಾಲಿ ಸಮಾಜದ ಪರವೇ ಇದ್ದೇನೆ ಎಂದು ಹೇಳಿದರು.

12 ಜನ ರಾಜೀನಾಮೆ ಕೊಟ್ಟು 4 ತಿಂಗಳು ವನವಾಸ ಅನುಭವಿಸಿದ್ದಾರೆ. ಅವರು ಬರದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲ. ಅವರ ತ್ಯಾಗದಿಂದ, ಪಂಚಮಸಾಲಿ ಸಮಾಜದ ಆಶೀರ್ವಾದ ದಿಂದ ಸಿಎಂ ಆಗಿ ಕುಳಿತಿದ್ದೇನೆ.‌ ಮೂರು ವರ್ಷ ಅಧಿಕಾರ ಮಾಡಬೇಕೆಂಬ ಅಭಿಪ್ರಾಯ ಕೊಡಿ. ದಯವಿಟ್ಟು ಬೇರೆ ರೀತಿಯಲ್ಲಿ ಮಾತನಾಡಬೇಡಿ ಎಂದು ಮನವಿ ಮಾಡಿದರು.

# ಹೇಳಿಕೆಗೆ ಕಾರಣವೇನು?
ಯಡಿಯೂರಪ್ಪನವರ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ನಾನಾ ಅರ್ಥಗಳನ್ನು ಹುಟ್ಟು ಹಾಕಿದೆ.
ರಾಜ್ಯ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ಈಗ ರಾಷ್ಟ್ರೀಯ ನಾಯಕರಿಗೂ ತಿಳಿಯುವಂತಾಗಿದೆ. “ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾ ದರೂ ಹತ್ತು ಬಾರಿ ಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ತಂತಿ ಮೇಲಿನ ನಡಿಗೆಯಂತಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಹಿಂದೆಯೇ ಹೇಳಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯ ಮಂತ್ರಿಗಳ ನಡುವೆ ಸಮನ್ವಯದ ಕೊರತೆ ಇರು ವುದು ಬಿಜೆಪಿಯ ಕೆಲವು ನಾಯಕರ ಹೇಳಿಕೆ ಯಿಂದಲೇ ಸಾಬೀತಾಗುತ್ತಲೇ ಇದೆ. ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರ ವಿಚಾರವಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪುಷ್ಠಿನೀಡುವಂತೆ ಮುಖ್ಯ ಮಂತ್ರಿಯವರೂ ನೀಡಿರುವ ಹೇಳಿಕೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿವಿಧ ಪ್ರಮುಖ ವಿಷಯಗಳ ನಿರ್ಧಾರದಲ್ಲಿ ಬಿಜೆಪಿ ನಿಷ್ಠಾವಂತರ ಬಣ ಹಾಗೂ ಮುಖ್ಯಮಂತ್ರಿಗಳ ಬೆಂಬಲಿಗರ ಬಣ ನಿರ್ಮಾಣವಾಗಿದೆ ಎಂಬುದು ಕೇಂದ್ರದ ನಾಯಕರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಅಲ್ಲದೆ, ಸಂಘಟನಾತ್ಮವಾಗಿ ಬಿಜೆಪಿ ಬೆಳೆಯಬೇಕು. ಇದಕ್ಕೆಲ್ಲ ಅವಕಾಶ ನೀಡಬೇಡಿ ಎಂಬ ಸೂಚನೆ ಕೂಡ ರಾಜ್ಯದ ನಾಯಕರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin