ಭಾರಿ ಭದ್ರತೆ ನಡುವೆ ವೈಷ್ಣೋದೇವಿ ಯಾತ್ರೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಕತ್ರಾ (ಜಮ್ಮು-ಕಾಶ್ಮೀರ), ಆ.16-ಕೊರೊನಾ ಹಾವಳಿಯಿಂದ ಐದು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಪ್ರಸಿದ್ಧ ವೈಷ್ಣೋದೇವಿ ಮಂದಿರ ಯಾತ್ರೆ ಇಂದಿನಿಂದ ಆರಂಭವಾಗಿದೆ.

ಒಂದೆಡೆ ಕೋವಿಡ್-19 ವೈರಸ್ ಪಿಡುಗು ಮತ್ತು ಇನ್ನೊಂದೆಡೆ ಉಗ್ರಗಾಮಿಗಳ ದಾಳಿ ಆತಂಕದ ಹಿನ್ನೆಲೆಯಲ್ಲಿ ಯಾತ್ರೆಗೆ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕೊರೊನಾ ಪಿಡುಗಿನಿಂದಾಗಿ ಒಂದು ದಿನಕ್ಕೆ 2,000 ಭಕ್ತರಿಗೆ ಮಾತ್ರ ವೈಷ್ಣೋದೇವಿ ಯಾತ್ರೆಗೆ ತೆರಳಲು ಅನುಮತಿ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಪರ್ವತದ ನೆತ್ತಿಯ ಮೇಲಿರುವ ಪ್ರಖ್ಯಾತ ವೈಷ್ಣೋದೇವಿ ಯಾತ್ರೆಯಲ್ಲಿ ಭಾಗವಹಿಸಲು ಜಮ್ಮುವಿನಿಂದ ಭಕ್ತರ 12 ತಂಡಗಳು ಒಂದು ನಸುಕಿನಲ್ಲೇ ಕತ್ರಾ ಪ್ರದೇಶಕ್ಕೆ ಆಗಮಿಸಿದವು.

ಬೆಳಗ್ಗೆ 6 ಗಂಟೆಗೆ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದಲ್ಲಿರುವ ವೈಷ್ಟೋದೇವಿ ಗಿರಿ ಮಂದಿರ ಮತ್ತು ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು

ಶ್ರೀ ಮಾತಾ ವೈಷ್ಣೋದೇವಿ ಮಂದಿರ ಮಂಡಳಿ (ಎಸ್‍ಎಂವಿಡಿಎಸ್‍ಬಿ) ಮುಖ್ಯ ಕಾರ್ಯ ನಿರ್ವಹಣಾಕಾರಿ(ಸಿಇಒ) ರಮೇಶ್ ಕುಮಾರ್ ಭದ್ರತಾ ಮತ್ತು ರೋಗ ನಿಯಂತ್ರಣದ ಉಸ್ತುವಾರಿ ವಹಿಸಿದ್ದಾರೆ.

ಕೊರೊನಾ ಹಾವಳಿ ಉಲ್ಬಣಗೊಂಡ ನಂತರ ಸೋಂಕು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್ 18ರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

Facebook Comments

Sri Raghav

Admin