ವಾಜಪೇಯಿ 95ನೇ ಜನ್ಮ ದಿನ : ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.25- ಭಾರತ ರತ್ನ , ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ 95ನೆ ಜನ್ಮ ದಿನಾಚರಣೆ ಅಂಗವಾಗಿ ಇಂದು ದೇಶಾದ್ಯಂತ ಭಾರತೀಯ ಜನತಾ ಪಾರ್ಟಿ ವತಿಯಿಂದ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶದ ಅತ್ಯುತ್ತಮ ಸಂಸದೀಯ ಪಟುವಿಗೆ ಗೌರವ ನಮನ ಸಲ್ಲಿಸಲಾಯಿತು.

ದೆಹಲಿಯ ರಾಜ್‍ಘಾಟ್‍ನಲ್ಲಿ ಸದೈವ ಅಟಲ್ ಸ್ಮಾರಕದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರುಲ ಮಹಾ ಚೇತನಕ್ಕೆ ಗೌರವ ನಮನ ಸಲ್ಲಿಸಿದರು.  ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮಾಜಿ ಪ್ರಧಾನಿಯನ್ನು ಸ್ಮರಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ವತಿಯಿಂದ ಸ್ಮಾರಕ ಬಳಿ ವಿಶೇಷ ಸ್ಮರಣೆ ಸಭೆ ಆಯೋಜಿತವಾಗಿದ್ದು, ಭಜನೆ, ಗೀತ ಗಾಯನ ಕಾರ್ಯಕ್ರಮ ನಡೆಯಿತು. ಉತ್ತರಪ್ರದೇಶದ ಲಕ್ನೋದ ಲೋಕ ಭವನದಲ್ಲಿ ಇಂದು ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿಯವರ 25 ಅಡಿಯಷ್ಟು ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ರಾಜಕೀಯ ಜೀವನ ಕಂಡು ಕೊಂಡಿದ್ದು ಲಕ್ನೋ ಲೋಕಸಭಾ ಕ್ಷೇತ್ರದಿಂದಲೇ. 1991, 1998, 1999 ಮತ್ತು 2004ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದರು. ಈ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥ ಇಲ್ಲಿ ವಾಜಪೇಯಿ ಪ್ರತಿಮೆ ಅನಾವರಣಗೊಳ್ಳಲಿದೆ. ಸಮಾರಂಭ ನಡೆಯುವ ಸ್ಥಳ ಸುತ್ತಮುತ್ತ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದರಿಂದ ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ವಿಶೇಷ ಭದ್ರತೆ ಒದಗಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಮೋದಿಯವರು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೇಶದ ವಿವಿಧೆಡೆಯೂ ಕೂಡ ಅಟಲ್ ಅವರ ಜನ್ಮ ಜಯಂತಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದಿವೆ.

Facebook Comments