ವಾಜಪೇಯಿ ಪ್ರಥಮ ಪುಣ್ಯಸ್ಮರಣೆ : ರಾಷ್ಟ್ರಪತಿ, ಪ್ರಧಾನಿ ಸೇರಿಂದಂತೆ ಗಣ್ಯರಿಂದ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.16-ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಥಮ ವಾರ್ಷಿಕ ಪುಣ್ಯಸ್ಮರಣೆ ಇಂದು. ದೆಹಲಿಯಲ್ಲಿರುವ ವಾಜಪೇಯಿ ಅವರ ಸ್ಮಾರಕ ಸದೈವ್ ಅಟಲ್‍ನಲ್ಲಿ ಇಂದು ಪ್ರಾರ್ಥನಾ ಸಭೆ ನಡೆಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ವಾಜಪೇಯಿ ಅವರ ಕುಟುಂಬದ ಸದಸ್ಯರೂ ಸೇರಿದಂತೆ ಗಣ್ಯಾತಿಗಣ್ಯರು ಧೀಮಂತ ನಾಯಕನಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಪ್ರಾರ್ಥನೆ ಸಭೆ ಪ್ರಯುಕ್ತ ಭಜನೆ ಮತ್ತು ಭಕ್ತಿ ಗೀತೆ ಗಾಯನ ಆಯೋಜಿಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್‍ನಲ್ಲಿ ಅಟಲ್ ಅವರ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಲಾಗಿತ್ತು. ಕೇಂದ್ರ ಸಮಾಧಿ ವೇದಿಕೆಯು ಒಂಭತ್ತು ಚದರ ಕಪ್ಪು ಗ್ರಾನೈಟ್ ಕಲ್ಲು ಚಪ್ಪಡಿಗಳನ್ನು ಹೊಂದಿದ್ದು, ಮಧ್ಯದಲ್ಲಿ ಪ್ರಾರ್ಥನಾ ಸ್ಥಳವಿದೆ. ಅತ್ಯುತ್ತಮ ಸಂಸದೀಯ ಪಟುವಾಗಿದ್ದ ಅಟಲ್ ಕಳೆದ ವರ್ಷ ಆಗಸ್ಟ್ 16ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ವಾಜಪೇಯಿ ಅವರ ವಾರ್ಷಿಕ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಬಿಜೆಪಿ ಧುರೀಣರು, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ ಸೇರಿದಂತೆ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಸಲ್ಲಿಸಿ ಮಾಜಿ ಪ್ರಧಾನಿಯ ಸಾಧನೆಗಳ ಗುಣಗಾನ ಮಾಡಿದ್ದಾರೆ.

Facebook Comments