ಜವಾಬ್ದಾರಿ ಅರಿತು ಮತಚಲಾಯಿಸಿದರೆ ದೇಶದ ಅಭಿವೃದ್ಧಿ ಸಾಧ್ಯ : ರಾಜ್ಯಪಾಲ ವಿ.ಆರ್.ವಾಲಾ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಮತದಾನದ ಮಹತ್ವ ಅರಿತು ಪ್ರತಿಯೊಬ್ಬರು ತಮ್ಮ ಅಧಿಕಾರವನ್ನು ಚಲಾಯಿಸಿದಾಗ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಶ್ರಮ ಸಾರ್ಥಕವಾಗುತ್ತದೆ ಎಂದು ರಾಜ್ಯಪಾಲ ವಜೂಬಾಯಿ ವಾಲ ಸಲಹೆ ನೀಡಿದ್ದಾರೆ.

ನಗರದ ಟೌನ್‍ಹಾಲ್‍ನಲ್ಲಿ ಚುನಾವಣಾ ಆಯೋಗದಿಂದ ಏರ್ಪಡಿಸಲಾಗಿದ್ದ 10ನೆ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ನಾಗರಿಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಭಾರತ ಬಲಿಷ್ಠ ವಾಗುತ್ತದೆ ಎಂದರು.

ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನೇಕ ಮಹಾನುಭಾವರು ಕಷ್ಟ ಪಟ್ಟಿದ್ದಾರೆ, ಬಹಳಷ್ಟು ತ್ಯಾಗ, ಬಲಿದಾನಗಳಾಗಿವೆ. ಅವರೆಲ್ಲರ ಕನಸು ಸಾಕಾರಗೊಳ್ಳಲು ನಾವೆಲ್ಲಾ ಜವಾಬ್ದಾರಿ ಅರಿತು ಕೆಲಸ ಮಾಬೇಕಿದೆ ಎಂದರು. ಮತದಾನದ ಮಹತ್ವ ಅರಿಯೋಣ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸೋಣ ಎಂದು ರಾಜ್ಯಪಾಲರು ಸಂದೇಶ ನೀಡಿದರು.

ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮತದಾರರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಹಲವು ಮಹನೀಯರು ಹಾಗೂ ಸಂಘಟನೆಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ನಾವೆಲ್ಲಾ ನಿರ್ಭಯವಾಗಿ ಮತಚಲಾವಣೆ ಮಾಡುತ್ತೇವೆ ಎಂಬ ಪ್ರತಿಜ್ಞಾಯನ್ನು ಬೋಧಿಸಲಾಯಿತು.

Facebook Comments