ವ್ಯಾಲೆಂಟೈನ್ ಸೆಲೆಬ್ರೇಷನ್ ಆರಂಭವಾಗಿದ್ದು ಹೇಗೆ..? ಏಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ರೋಮ್ ನಗರದ ಮಹಾಪುರುಷ, ಧರ್ಮಗುರು, ಪವಾಡ ಪುರುಷ ವ್ಯಾಲೆಂಟೈನ್. ಈತ ಹುತಾತ್ಮನಾದ ದಿನವನ್ನು ವಿಶ್ವ ಪ್ರೇಮಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ವ್ಯಾಲೆಂಟೈನ್ ಎಂಬ ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾದುದು ಹೇಗೆ? ರೋಮ್ ನಗರದ ಪ್ರಜೆಗಳು ಈತನನ್ನು ಪವಾಡ ಪುರುಷನಾಗಿ ಪೂಜಿಸುವ ಮುನ್ನ ಈತ ಏನಾಗಿದ್ದ?

ವೈದ್ಯನಾಗಿದ್ದ ವ್ಯಾಲೆಂಟೈನ್: 270ನೆ ಇಸವಿಯಲ್ಲಿ ರೋಮ್ ಚಕ್ರವರ್ತಿ ಎರಡನೆ ಕ್ಲಾಡಿಯಾಸ್ ಎಂದೇ ಹೆಸರಾದ ಕ್ಲಾಡಿಯಾಸ್ ಗಾಥಿಕಸ್ ತನ್ನ ಅಧಿಪತ್ಯದ ವೇಳೆ ಸೈನ್ಯವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಸೈನಿಕರಿಗೆ ವಿವಾಹವನ್ನು ನಿಷೇಧಿಸಿದ. ಸೈನಿಕರಿಗೆ ವಿವಾಹ ಬಂಧನವು ಚಿತ್ತಚಾಂಚಲ್ಯವನ್ನು ಉಂಟುಮಾಡುತ್ತದೆ ಮತ್ತು ಈ ಕಾರಣದಿಂದಾಗಿ ಸೇನೆಯ ಬಲ ಕುಂಠಿತಗೊಳ್ಳುತ್ತದೆ ಎಂಬುದು ಆತನ ಬಲವಾದ ನಂಬಿಕೆ.

ಈ ನಂಬಿಕೆಯ ವಿರುದ್ಧ ಬಂದವನೇ ವೈದ್ಯನಾಗಿದ್ದ ವ್ಯಾಲೆಂಟೈನ್. ಈತ ಅಲ್ಲಿನ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದ ಮತ್ತು ಆತನೊಬ್ಬ ಧರ್ಮಗುರುವಾಗಿ ಅಂತರ್ ಧರ್ಮೀಯ ವಿವಾಹವನ್ನು ಪ್ರಚೋದಿಸುತ್ತಿದ್ದ. ಈ ಕಾರಣಗಳಿಂದ ಕುಪಿತನಾದ ಕ್ಲಾಡಿಯಾಸ್ ದೊರೆ ವ್ಯಾಲೆಂಟೈನನಿಗೆ ಸೆರೆಮನೆ ವಾಸದ ಶಿಕ್ಷೆ ವಿಧಿಸುತ್ತಾನೆ.

ಸೆರೆಮನೆಯೇ ಪ್ರೇಮ ಬಂಧನ: ಸೆರೆಮನೆಯಲ್ಲಿದ್ದ ವ್ಯಾಲೆಂಟೈನನ ಪಾಂಡಿತ್ಯಕ್ಕೆ ಬೆರಗಾದ ಸೆರೆಮನೆಯ ಅಧಿಕಾರಿ ಆಸ್ಟೀರಿಯಸ್, ತನ್ನ ಹುಟ್ಟುಗುರುಡು ಮಗಳು ಜೂಲಿಯಾಳಿಗೆ ಪಾಠ ಹೇಳಿಕೊಡಲು ವ್ಯಾಲೆಂಟೈನನನ್ನು ನೇಮಿಸುತ್ತಾನೆ. ಈ ವೇಳೆ ವ್ಯಾಲೆಂಟೈನನಿಗೆ ಜೂಲಿಯಾಳಲ್ಲಿ ಪ್ರೇಮಾಂಕುರವಾಗುತ್ತದೆ. ಇನ್ನು ಕ್ಲಾಡಿಯಾಸ್ ದೊರೆಯೂ ವ್ಯಾಲೆಂಟೈನನ ಪಾಂಡಿತ್ಯಕ್ಕೆ ಬೆರಗಾಗಿ ಆತನನ್ನು ಬಿಡುಗಡೆಗೊಳಿಸಲು ನಿರ್ಧರಿಸಿ ಕೆಲವು ಷರತ್ತುಗಳನ್ನು ವಿಧಿಸುತ್ತಾನೆ.

ನಿಯಮಗಳ ಅನ್ವಯ ವ್ಯಾಲೆಂಟೈನ್ ತನ್ನ ಮುಂದಿನ ದಿನಗಳನ್ನು ರೋಮ್ ದೇವತೆಗಳನ್ನು ಪೂಜಿಸುತ್ತ ಅಂತರ್ ಧರ್ಮೀಯ ವಿವಾಹವನ್ನು ನಿಲ್ಲಿಸಬೇಕೆಂದಾಗಿರುತ್ತದೆ. ಒಪ್ಪಂದಕ್ಕೆ ಒಪ್ಪದ ವ್ಯಾಲೆಂಟೈನ್ ಕ್ಲಾಡಿಯಾಸನಿಗೂ ಮತಾಂತರ ಹೊಂದುವಂತೆ ಹೇಳುತ್ತಾನೆ. ಇದರಿಂದ ಮತ್ತಷ್ಟು ಕುಪಿತನಾದ ದೊರೆ ಆತನಿಗೆ ಮರಣ ದಂಡನೆಯನ್ನು ವಿಧಿಸುತ್ತಾನೆ. ಫೆಬ್ರವರಿ 14ರಂದು ವ್ಯಾಲೆಂಟೈನ್ ಹುತಾತ್ಮನಾಗುತ್ತಾನೆ. ಈ ದಿನವನ್ನು ಪ್ರೇಮಿಗಳ ದಿನಾಚರಣೆಯಾಗಿ ಇಡೀ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ.

ಸಾವಿನ ನಂತರ ಸೃಷ್ಟಿಯಾದ ಪವಾಡಗಳು: ವ್ಯಾಲೆಂಟೈನ್ ತನ್ನ ಸಾವಿಗೂ ಮುನ್ನ ಪ್ರೇಯಸಿ ಜೂಲಿಯಾಳಿಗೆ ಪ್ರೇಮಪತ್ರವೊಂದನ್ನು ಬರೆದಿರುತ್ತಾನೆ. ಸ್ವತಃ ವೈದ್ಯನಾಗಿದ್ದ ವ್ಯಾಲೆಂಟೈನ್ ಸೆರೆಮನೆಯಲ್ಲಿದ್ದಾಗ ಜೂಲಿಯಾಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ಆಕೆಯ ಅಂಧತ್ವಕ್ಕೆ ಚಿಕಿತ್ಸೆಯನ್ನೂ ನೀಡುತ್ತಿದ್ದ ಎಂಬುದು ರೋಮ್ ಪ್ರಜೆಗಳಲ್ಲಿನ ನಂಬಿಕೆಯಾದರೂ, ಹೆಚ್ಚು ಪ್ರಚಲಿತಗೊಂಡದ್ದು ಮಾತ್ರ ಸಾವಿನ ನಂತರ ಆತ ಸೃಷ್ಟಿಸಿದ ಪವಾಡದಿಂದ.

ಜೂಲಿಯಾ ಅದುವರೆಗೂ ಬೇರೆಯವರ ಸಹಾಯದಿಂದ ಓದುತ್ತಿದ್ದವಳು ವ್ಯಾಲೆಂಟೈನ್ ಬರೆದ ಪತ್ರವನ್ನು ಯಾರ ಸಹಾಯವೂ ಇಲ್ಲದೆ ಸ್ವತಃ ತಾನೇ ಓದುತ್ತಾಳೆ. ಆಕೆಗೆ ದೃಷ್ಟಿ ಮರಳಿಸಿದ ಧಾರ್ಮಿಕ ಗುರು ವ್ಯಾಲೆಂಟೈನನ್ನು ಅಂದಿನಿಂದ ರೋಮ್ ಪ್ರಜೆಗಳು ಪವಾಡ ಪುರುಷನೆಂದು ನಂಬಿ ಪೂಜಿಸತೊಡಗಿದರು.ಪ್ರೇಮ ನಿವೇದನೆ ಮಾಡುವ ಮುನ್ನ, ಪ್ರೇಮಿಗಳ ನಡುವಿನ ಕಲಹ, ಭಿನ್ನಾಭಿಪ್ರಾಯಗಳು, ಸತಿ-ಪತಿಗಳ ನಡುವಿನ ಕಲಹಗಳಿಗೆ ಜನರು ವ್ಯಾಲೆಂಟೈನ್‍ನ ಮೊರೆ ಹೋಗುತ್ತಿದ್ದರು.

ಕಾಕತಾಳೀಯವೋ ಎಂಬಂತೆ ಪ್ರಾರ್ಥಿಸಿದವರ ಸಮಸ್ಯೆಗಳೆಲ್ಲವೂ ನೀಗುತ್ತಾ ಬಂದವು. ಹಾಗಾಗಿ ಫೆಬ್ರವರಿ 14, ಆತ ಹುತಾತ್ಮನಾದ ದಿನವನ್ನು ಉತ್ಸವವನ್ನಾಗಿ ಆಚರಿಸುವುದು ರೂಢಿಯಾಯಿತು. ಆತ ಜೂಲಿಯಾಳಿಗೆ ಬರೆದ ಪ್ರೇಮಪತ್ರದ ಕೊನೆಯಲ್ಲಿ From your Valentine ಎಂದು ಸೂಚಿಸಿದ್ದನ್ನೇ ಯುವ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಯ ಪತ್ರದ ಕೊನೆಯಲ್ಲಿ ಬಳಸಲು ಪ್ರಾರಂಭಿಸಿದರು.

ಹೀಗೆ ಅಂದಿನ ರೋಮ್ ಪವಾಡ ಪುರುಷನ ಬೆನ್ನು ಹತ್ತಿದ ಪ್ರಜೆಗಳ ಜಡನ್ನೇ ಹಿಡಿದು ಇಡೀ ವಿಶ್ವವೇ ಆತ ಹುತಾತ್ಮನಾದ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಕಾಲಕ್ರಮೇಣ ಆ ದಿನದ ರೂಪುರೇಷೆಗಳೂ ಸಹ ಬದಲಾಗುತ್ತ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತ ಬಂದಿದೆ.

ಅಂದು ಜೂಲಿಯಾಳ ಚಕ್ಷುಗಳಿಗೆ ಬೆಳಕನ್ನಿತ್ತ ಪವಾಡ ಪುರುಷನಂತಹವನೊಬ್ಬ ಭಾರತೀಯರ ಅಂತಃಚಕ್ಷುಗಳ ಮೇಲೆ ಬೆಳಕು ಚೆಲ್ಲಲು ಮತ್ತೆ ಅವತರಿಸಬೇಕಿದೆ.
ಪ್ರೇಮಾಯ ತಸ್ಮೈ ನಮಃ.

#ಚಂದ್ರಕಲಾ ಮಂಜುನಾಥ್

Facebook Comments