ವರಮಹಾಲಕ್ಷ್ಮಿ ಹಬ್ಬದ ಮಹತ್ವವೇನು..? ಏಕೆ ಮತ್ತು ಹೇಗೆ ಆಚರಿಸಬೇಕು..?

ಈ ಸುದ್ದಿಯನ್ನು ಶೇರ್ ಮಾಡಿ

ದುಡ್ಡು ಯಾರಿಗೆ ಬೇಡ..? ದುಡ್ಡಿಲ್ಲದೆ ಜೀವನವೇ ಇಲ್ಲ ಎಂಬ ಎಣಿಕೆಯಲ್ಲಿ ಬದುಕುತ್ತಿರುವವರು ನಾವು. ದುಡ್ಡು ಎಂದರೆ ಲಕ್ಷ್ಮಿ; ಲಕ್ಷ್ಮಿ ಎಂದರೆ ದುಡ್ಡು ಎಂಬ ಸಮೀಕರಣ ನಮ್ಮದು. ಶ್ರೀ ಲಕ್ಷ್ಮಿ ಎಂದು ಬಳಸುವುದೇ ಹೆಚ್ಚು ವಾಡಿಕೆ. ಶ್ರೀ ಎಂದರೆ ಸಂಪತ್ತು, ಐಶ್ವರ್ಯ ಎಂದೆಲ್ಲ ಅರ್ಥಗಳಿವೆ. ಸಂಪತ್ತು ಎಂದ ಕೂಡಲೇ ಹಣ, ಮನೆ, ಒಡವೆ, ಆಸ್ತಿ, ಅಂತಸ್ತು-ಇಷ್ಟರಲ್ಲಿಯೇ ಯೋಚಿಸುತ್ತೇವೆ.

ಆದರೆ, ಶ್ರೀ ಅನ್ನುವುದಕ್ಕೆ ಇನ್ನೂ ವ್ಯಾಪಕವಾದ ಅರ್ಥಗಳಿವೆ. ಸಂಪತ್ತು ಎನ್ನುವುದು ಕೇವಲ ಹೊರಗಿನ ಸಂಪತ್ತು ಮಾತ್ರವೇ ಅಲ್ಲ; ನಮ್ಮ ಅಂತರಂಗದ ಸಂಪತ್ತು ಕೂಡ ಅದರಲ್ಲಿ ಸೇರುತ್ತದೆ. ಲಕ್ಷ್ಮಿ ಎಂದರೆ ಎಲ್ಲವನ್ನೂ ಸದಾ ನೋಡುತ್ತಿರುವವಳು (ಲಕ್ಷಯತಿ ಸರ್ವಂ ಸದಾ ಇತಿ ಲಕ್ಷ್ಮಿಃ) ಎಂದು ಅರ್ಥ. ಎಂದರೆ ನಮ್ಮ ಜೀವನದ ಎಲ್ಲ ಕ್ಷಣಗಳಲ್ಲೂ ಎಲ್ಲ ಕಣಗಳಲ್ಲಿಯೂ ಎಲ್ಲ ಆಯಾಮಗಳಲ್ಲೂ ಎಲ್ಲ ಅನುಭವಗಳಲ್ಲೂ ನೆಲೆಯಾಗಿರುವವಳು ಶ್ರೀಲಕ್ಷ್ಮಿ.

ಸಾಮಾನ್ಯವಾಗಿ ಲಕ್ಷ್ಮಿಯನ್ನು ಎಂಟು ರೂಪಗಳಲ್ಲಿ ಪೂಜಿಸಲಾಗುತ್ತದೆ. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮಿ, ಶೌರ್ಯಲಕ್ಷ್ಮಿ, ಕೀರ್ತಿಲಕ್ಷ್ಮಿ, ಸೌಮ್ಯಲಕ್ಷ್ಮಿ, ವಿಜಯಲಕ್ಷ್ಮಿ- ಈ ಎಂಟು ರೂಪಗಳು ನಮ್ಮ ಬದುಕಿಗೆ ಬೇಕಾದ ಎಲ್ಲ ಸಿರಿವಂತಿಕೆಯನ್ನೂ ಪ್ರತಿನಿಧಿಸುತ್ತವೆ. ಮೋಕ್ಷಲಕ್ಷ್ಮಿ ಎಂದೂ ಲಕ್ಷ್ಮಿಯನ್ನೂ ಕರೆಯುವುದುಂಟು.

ಮೋಕ್ಷ ಎನ್ನುವುದು ಬಾಹ್ಯ ಜಗತ್ತಿನಲ್ಲಿ ಸುಖವನ್ನು ಹುಡುಕುವುದಲ್ಲ; ಅಂತರಂಗದ ಆನಂದ ದಲ್ಲಿ ವಿಹರಿಸುವುದೇ ಮೋಕ್ಷ. ಅದಕ್ಕೂ ಒಡತಿಯಾಗಿರು ವವಳೇ ಲಕ್ಷ್ಮಿ. ಹೀಗಾಗಿ ನಮ್ಮ ಲೌಕಿಕ ಬದುಕಿಗೂ ಅಲೌಕಿಕ ಬದುಕಿಗೂ ಬೇಕಾದ ಹೊರಗಿನ-ಒಳಗಿನ ಎಲ್ಲ ಐಶ್ವರ್ಯಗಳ ಮೂರ್ತರೂಪವೇ ಶ್ರೀಲಕ್ಷ್ಮಿ.

ಲಕ್ಷ್ಮಿಗೂ ಮೊದಲು ಹುಟ್ಟಿದವಳು ಜ್ಯೇಷ್ಠಾಲಕ್ಷ್ಮಿ. ಅವಳು ಬಡತನ, ಕೊಳಕು, ಕೆಟ್ಟ ಮಾತು, ಸೋಮಾರಿತನಗಳನ್ನು ಪ್ರತಿನಿಧಿಸುತ್ತಾಳೆ. ಎಲ್ಲಿ ಜ್ಯೇಷ್ಠಾಲಕ್ಷ್ಮಿ ಇರುತ್ತಾಳೆಯೋ ಅಲ್ಲಿ ಲಕ್ಷ್ಮಿ ಇರುವುದಿಲ್ಲ. ಕ್ರಿಯಾಶೀಲತೆಗೂ ಶುಭ್ರತೆಗೂ ಅಂತರಂಗ-ಬಹಿರಂಗದ ಸಿರಿತನಕ್ಕೂ ಸಂಕೇತವಾಗಿರುವವಳು ಲಕ್ಷ್ಮಿ. ಕ್ಷೀರಸಾಗರದಲ್ಲಿ ಜನಿಸಿದ ಲಕ್ಷ್ಮಿದೇವಿ ಶ್ರೀ ಮಹಾವಿಷ್ಣುವಿನ ವಕ್ಷಸ್ಥಳ, ಎಂದರೆ ಎದೆಯ ಭಾಗದಲ್ಲಿ ನೆಲೆಯನ್ನು ಪಡೆದಳಂತೆ.

ಹೆಣ್ಣನ್ನು ಮಹಾಲಕ್ಷ್ಮಿ ಎಂದೇ ಭಾವಿಸುತ್ತೇವೆ. ಹೆಣ್ಣುಮಕ್ಕಳಿಗೂ ಲಕ್ಷ್ಮಿ ಎಂದರೆ ಎಲ್ಲಿಲ್ಲದ ಭಕ್ತಿ. ಅದರಲ್ಲೂ ವರಮಹಾಲಕ್ಷ್ಮಿ ವ್ರತ ಮಾಡುವುದು ವರ್ಷಕ್ಕೊಮ್ಮೆ ಬರುವ ಭಾಗ್ಯ ಎಂದೇ ಗೃಹಿಣಿಯರು ಪರಿಗಣಿಸುತ್ತಾರೆ.

ನಮ್ಮ ರಾಜ್ಯವೂ ಸೇರಿದಂತೆ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡುಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪುರಾತನ ನಾಣ್ಯಗಳ ಅಧ್ಯಯನದಿಂದ ಕ್ರಿ.ಪೂ. 1ನೇ ಶತಮಾನದಿಂದಲೂ ದೇಶದಲ್ಲಿ ಲಕ್ಷ್ಮಿಯ ಆರಾಧನೆ ಇರುವುದನ್ನು ಕಾಣಬಹುದು. ಕ್ರಿ.ಪೂ 1ನೆ ಶತಮಾನದ ಗಾಂಧಾರ ಸಾಮ್ರಾಜ್ಯದ ನಾಣ್ಯಗಳಲ್ಲಿ ಲಕ್ಷ್ಮಿದೇವಿಯಯನ್ನು ಕಾಣಬಹುದು. 2ನೆ ಶತಮಾನದ ಬೃಹತ್ ಸ್ತೂಪದಲ್ಲಿ ಲಕ್ಷ್ಮಿದೇವಿ ಇದ್ದಾಳೆ.

3ನೆ ಶತಮಾನದ ಸಾಂಚಿ ಸ್ತೂಪದಲ್ಲಿ ಗಜಲಕ್ಷ್ಮಿದೇವಿ ಇದ್ದಾಳೆ. ಆ ಕಾಲದ ನಾಣ್ಯಗಳಲ್ಲೂ ಲಕ್ಷ್ಮಿದೇವಿ ವಿರಾಜಮಾನಳು. ಆರ್ಶೀವಾದ ಸ್ವರೂಪಳಾದ ಶ್ರೀಲಕ್ಷ್ಮಿಯನ್ನು ಪೂಜಿಸುವ ಹಬ್ಬ. ದುಷ್ಪರಿಣಾಮಗಳನ್ನು ನಾಶಪಡಿಸಲು ಶ್ರೀಲಕ್ಷ್ಮಿಯನ್ನು ಪ್ರಾರ್ಥಿಸಬೇಕು. ಲಕ್ಷ್ಮಿ ಒಲಿದರೆ ಬರುತ್ತಾಳೆ. ಆದರೆ ಬರುವಾಗ ಧರ್ಮದಂಡವನ್ನು ಕೈಯಲ್ಲಿ ಹಿಡಿದೇ ಬರುತ್ತಾಳೆ. ಕಾರಣ ಅವಳು ಸ್ವಯಂ ಧರ್ಮದಂಡ ಸ್ವರೂಪದವಳು.

# ಲಕ್ಷ್ಮಿಯ ನೆಲೆ: ಮನೆಯಲ್ಲಿ ಪ್ರತಿ ದಿನವೂ ದೀಪವನ್ನು ಬೆಳಗುವುದರಿಂದ, ತುಳಸಿಯನ್ನು ಪೂಜಿಸುವುದರಿಂದ, ಮನೆಯ ಮುಂದೆ ರಂಗೋಲಿಯಿಂದ ಹಿಡಿದು ಸುಮಂಗಲಿಯ ಹಣೆಯಲ್ಲಿ ಕಮಲದಲ್ಲಿ, ಆನೆಯ ಕುಂಭಸ್ಥಳದಲ್ಲಿ ಹಸುವಿನ ಬಾಲದಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ನಂಬಿದ್ದೇವೆ.

# ವರಮಹಾಲಕ್ಷ್ಮಿ ಹಬ್ಬ: ಈ ಹಬ್ಬವನ್ನು ಶ್ರಾವಣ ಮಾಸದ ಎರಡನೆ ಶುಭ ಶುಕ್ರವಾರ ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಅಮರಾವತಿಯಲ್ಲಿನ ಒಂದು ಕುಟುಂಬದ ಅತ್ಯಂತ ದೈವ ಭಕ್ತಿಯುಳ್ಳ ಚಾರುಮತಿಯೆಂಬ ಮಹಿಳೆಯ ಕನಸಲ್ಲಿ ತಾಯಿ ಮಹಾಲಕ್ಷ್ಮಿಯು ಕಾಣಿಸಿಕೊಂಡು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವಂತೆ ಹೇಳಿದಳೆಂಬ ನಂಬಿಕೆಯಿಂದ ಆಚರಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಳೆಂಬ ಪ್ರತೀತಿಯಂತೆ ವರಮಹಾಲಕ್ಷ್ಮಿಯನ್ನು ಹೆಣ್ಣುಮಕ್ಕಳು ಭಕ್ತಿ-ಭಾವದಿಂದ ಪೂಜಿಸುತ್ತಾರೆ.

# ಅಲಂಕಾರ: ಈ ಹಬ್ಬವನ್ನು ಮನೆಯ ಹೆಂಗೆಳೆಯರು ಅತ್ಯಂತ ಸಂಭ್ರಮದಿಂದ ಯಾವುದೇ ಬೇದ-ಭಾವವಿಲ್ಲದೆ ಆಚರಿಸುತ್ತಾರೆ. ಮನೆಯಲ್ಲಿ ಸುಖ-ಸಂತೋಷ, ಸಮೃದ್ಧಿ ನೆಲೆಸಲೆಂದು ತಳಿರು-ತೋರಣಗಳಿಂದ ಅಲಂಕೃತವಾದ ಪೀಠದಲ್ಲಿ ಲಕ್ಷ್ಮಿಯ ಕಳಶವಿಟ್ಟು ಬಣ್ಣ ಬಣ್ಣದ ವಿವಿಧ ಹೂಗಳು, ಆಭರಣಗಳನ್ನು ತೊಡಿಸಿ ವಿಧ ವಿಧದ ಅಲಂಕಾರಗಳಿಂದ ಶೃಂಗರಿಸಿ ಪೂಜಿಸಲಾಗುತ್ತದೆ.

# ಸಂಭ್ರಮ-ಸಡಗರ: ಲಕ್ಷ್ಮಿಯೊಂದಿಗೆ ಹಣ ಮತ್ತು ಆಭರಣಗಳನ್ನು ಜೋಡಿಸಿ, ಸಿರಿ, ಸಂಪತ್ತು ಭೂಮಿ, ವಿದ್ಯೆ, ಪ್ರಿತಿ, ಶಾಂತಿ, ಶಕ್ತಿ ವೃದ್ಧಿಯಾಗಲೆಂದು ಲಕ್ಷ್ಮಿಯೂ ಸದಾ ಮನೆಯಲ್ಲಿ ನೆಲೆಸಿರಲೆಂದು ಪೂಜಿಸಲಾಗುತ್ತದೆ.

# ಶ್ರೀ ವರಮಹಾಲಕ್ಷ್ಮಿ ಪೂಜಾ ವಿಧಾನ: ಆಷಾಢ ಮಾಸದ ಕೊನೆಯ ದಿನ ಭೀಮನ ಅಮಾವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲು ಪ್ರಾರಂಭ.  ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮಾಡಿ ರೇಷಿಮೆ ಬಟ್ಟೆ ಧರಿಸಿ ಪೂಜಾ ಸಾಮಗ್ರಿಗಳನ್ನೆ¯್ಲÁ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗಬೇಕು.

ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಳಶದಲ್ಲಿರಿಸಿ ಅದಕ್ಕೆ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀ ವಲ್ಲಭೆ ಬಾಳೆ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ-ಕುಂಕುಮ, ಗೆಜ್ಜೆ ವಸ್ತ್ರ ಇಟ್ಟು ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಅತ್ಯಂತ ಹರ್ಷದಿಂದ, ಭಕ್ತಿ-ಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮಿಯು ಶಾಶ್ವತವಾಗಿ ನೆಲೆಸಿ ಹರಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ.

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿ ತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರ ಭೂಷಿತೆಗೆ ಬಹಳ ಪ್ರಿಯ.

ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿ ತಿನಿಸು, ಹಾಲು-ಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ-ಕುಂಕುಮದ ಜತೆಗೆ ಮರದ ಬಾಗಿನ ಕೊಡಲಾಗುತ್ತದೆ. ನಂತರ ತಮ್ಮ ಸಂಕಷ್ಟಗಳನ್ನು ದೂರ ಮಾಡಿ ಸುಖ-ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತಾರೆ.

Facebook Comments