BIG NEWS : ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸರ್ವೆಗೆ ಕೋರ್ಟ್ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ವಾರಣಾಸಿ, ಮೇ 12- ಇಲ್ಲಿನ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ಮಂದಿರದ ಬಳಿ ಇರುವ ಗ್ಯಾನವ್ಯಾಪಿ ಮಸೀದಿಯೊಳಗೆ ವಿಡಿಯೋ ಸರ್ವೆಗೆ ಕೋರ್ಟ್ ಅನುಮತಿ ನೀಡಿದೆ. ಮಸೀದಿಯೊಳಗೆ ಹಿಂದು ದೇವರ ವಿಗ್ರಹವಿದ್ದು, ಅವುಗಳ ಪೂಜೆಗೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 17ರೊಳಗೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಗ್ಯಾನವ್ಯಾಪಿ ಮಸೀದಿಯೊಳಗೆ ಯಾವಾಗ ವಿಡಿಯೋ ಚಿತ್ರೀಕರಣ ಮಾಡಬೇಕು ಮತ್ತು ವಿಡಿಯೋ ಗ್ರಫಿ ಉಸ್ತುವಾರಿಗೆ ನೇಮಕಗೊಂಡ ಅಧಿಕಾರಿಯ ಬದಲಾವಣೆ ಮಾಡಬೇಕೇ ಎಂಬ ವಿಷಯಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ವೆ ಕಮೀಷನ್ ಬದಲಾವಣೆಗೆ ನಕಾರ ವ್ಯಕ್ತಪಡಿಸಿ ಇನ್ನೂ ಇಬ್ಬರು ಸರ್ವೆ ಕಮೀಷನರ್‍ಗಳ ನೇಮಕಾತಿಗೆ ಆದೇಶ ನೀಡಿ ನಾಳೆಯಿಂದಲೇ ಸ್ಥಳ ಪರಿಶೀಲನೆಗೆ ನಿರ್ದೇಶನ ನೀಡದೆ. ಈ ಮೂಲಕ ಹಿಂದೂಪರ ಅರ್ಜಿದಾರರಿಗೆ ಭಾರಿ ಗೆಲುವು ದೊರೆತಂತಾಗಿದೆ.

ಮಸೀದಿಯೊಳಗೆ ಹಿಂದೂ ದೇವರ ವಿಗ್ರಹವಿದ್ದು ಅವುಗಳ ಪೂಜೆಗೆ ಅವಕಾಶ ನೀಡಬೇಕೆಂಬ ಅರ್ಜಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‍ನ ಈ ಹಿಂದಿನ ಆದೇಶದಂತೆ ಮೇ 6, 7ರಂದು ಅಧಿಕಾರಿಗಳ ತಂಡ ಮಸೀದಿಯ ವಿಡಿಯೋ ಸಮೀಕ್ಷೆಗೆ ತೆರಳಿತ್ತು.

ಆದರೆ, ಮಸೀದಿಯ ಒಳಗೆ ವಿಡಿಯೋ ಮಾಡಲು ಆಡಳಿತ ಮಂಡಳಿಯವರು ಅವಕಾಶ ನೀಡಿರಲಿಲ್ಲ. ಮೇಲುಸ್ತುವಾರಿ ಅಧಿಕಾರಿಯನ್ನು ಬದಲಾಯಿಸಬೇಕೆಂದು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಈ ಅರ್ಜಿ ಕುರಿತು ವಾದ ಪ್ರತಿವಾದ ನಡೆದು ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ: ಮಸೀದಿಯ ಪಶ್ಚಿಮ ಕೋಡೆ ಮೇಲೆ ಇರುವ ಕೆಲವು ದೇವತೆಗಳ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಮೇರೆಗೆ ನ್ಯಾಯಾಲಯವು ಈ ಹಿಂದೆ ಸಮೀಕ್ಷೆಗೆ ಆದೇಶಿಸಿತ್ತು. ಇದಕ್ಕಾಗಿ ನ್ಯಾಯಾಲಯ ಅಜಯ್‍ಕುಮಾರ್ ಮಿಶ್ರಾ ಅವರನ್ನು ಕೋರ್ಟ್ ಕಮೀಷನರ್ ಆಗಿ ನೇಮಿಸಿತ್ತು.

ಇದಾದ ಬಳಿಕ ಮಸೀದಿ ಆಡಳಿತ ಸಮಿತಿ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಜಯ್‍ಕುಮಾರ್ ಮಿಶ್ರಾ ಅವರನ್ನು ಬದಲಾಯಿಸಬೇಕೆಂದು ಮನವಿ ಮಾಡಿತ್ತು. ನ್ಯಾಯಾಲಯವು ನಿಯೋಜಿಸಿದ್ದ ಈ ಕಡ್ಡಾಯ ಕಾರ್ಯದಲ್ಲಿ ಮಿಶ್ರಾ ಹಿಂದೂ ಅರ್ಜಿದಾರರ ಪರವಾಗಿದ್ದಾರೆ ಎಂದು ಆರೋಪಿಸಿದ್ದರು.

ಮಿಶ್ರಾ ಮತ್ತು ಹಿಂದೂ ಹಾಗೂ ಮುಸ್ಲಿಂ ಎರಡೂ ಕಡೆಯ ವಕೀಲರು ಕಳೆದ ಶನಿವಾರ ಗ್ಯಾನವ್ಯಾಪಿ-ಶೃಂಗಾರ್ ಗೌರಿದೇವಸ್ಥಾನದ ಸಂಕೀರ್ಣದೊಳಗೆ ಹೋಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕ್ಯಾಂಪಸ್ ಒಳಗೆ ಕಾದು ಕುಳಿತರು. ಕಾಮಗಾರಿ ಪೂರ್ಣಗೊಳಿಸಲಾಗದೆ ಆವರಣದಿಂದ ಹೊರ ಬರಬೇಕಾಯಿತು.

Facebook Comments