ಬೆಳ್ತಂಗಡಿ ಕಾಂಗ್ರೆಸ್ನಲ್ಲಿ ಭಿನ್ನಮತ, ಮಾಜಿ ಶಾಸಕ ವಸಂತ ಬಂಗೇರ ಅಸಮಾಧಾನ
ಬೆಳ್ತಗಂಡಿ, ಡಿ.7- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ,ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರ ಅಸಮಧಾನ ಹೊರ ಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಕಾಂಗ್ರೆಸ್ನಲ್ಲಿ ನಾನು ಒಬ್ಬನೇ ಇರುವುದಲ್ಲ, ನಾನು ಮಾಜಿ ಶಾಸಕ, ಹಾಗಿದ್ದರೂ ನಾನೇ ಪಾರ್ಟಿ ಕಟ್ಟಬೇಕು, ನಾನೇ ಪಾರ್ಟಿ ಬಗ್ಗೆ ಹೋರಾಟ ಮಾಡಬೇಕು, ಪಾರ್ಟಿಯನ್ನು ನಾನೇ ರಕ್ಷಣೆ ಮಾಡಬೇಕು. ಇನ್ಯಾರಿಗೂ ಸಮಯವಿಲ್ಲವೇ ಎಂದು ಕಿಡಿಕಾರಿದ್ದಾರೆ.
ತೊಂದರೆ ಆಗುವವರು ಕಾಂಗ್ರೆಸ್ನಲ್ಲಿ ಯಾಕೆ ಇರಬೇಕು, ಬಿ.ಜೆ.ಪಿ.ಗೆ ಹೋಗಲಿ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಾಳೆ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹರೀಶ್ ಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕೆಲವು ಅನುದಾನಗಳು ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಾಗಿದ್ದು, ಇದನ್ನು ಜನತೆಗೆ ತಿಳಿಸುವ ಜವಾಬ್ದಾರಿ ಜಿಲ್ಲಾಧ್ಯಕ್ಷರು ಸಹಿತ ನಮ್ಮದಾಗಿದೆ.
ಇದನ್ನು ಬಿಟ್ಟು ಈಗಿನ ಶಾಸಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಜನತೆಗೆ ಯಾವ ಸಂದೇಶ ಹೋಗಬಹುದು ಎಂದು ವಿಮರ್ಶೆ ಮಾಡಿ ಕೊಳ್ಳಬೇಕು ಎಂದರು. ಇದೇ ವೇಳೆ ಬೆಳ್ತಂಗಡಿ ಶಾಸಕರ ವಿರುದ್ಧ ಶಾಸಕನಾಗಿ ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದು ನಾನು, ಈಗಿನ ಶಾಸಕರು ಎಲ್ಲವೂ ನಾನು ಮಾಡಿದ್ದು ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.