ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ಖಂಡಿಸಿ ಅತ್ತಿಬೆಲೆ ಗಡಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಮರಾಠಿ ಭಾಷಿಗರ ಬಾಹುಳ್ಯ ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಅತ್ತಿಬೆಲೆ ಗಡಿ ಬಂದ್ ಮಾಡಿ ಕನ್ನಡ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವು, ಕನ್ನಡ ಸೇನೆ ಕುಮಾರ್, ಗಿರೀಶ್‍ಗೌಡ ಸೇರಿದಂತೆ ಹಲವು ಮುಖಂಡರು ತಮಿಳುನಾಡು- ಕರ್ನಾಟಕ ಗಡಿ ಪ್ರದೇಶವಾದ ಅತ್ತಿಬೆಲೆ ಸಮೀಪ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿ ಈ ಹೇಳಿಕೆಯನ್ನು ಕೂಡಲೇ ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ತಾಳವಾಡಿ, ಹೊಸೂರು, ಊಟಿ ಕರ್ನಾಟಕಕ್ಕೆ ಸೇರಬೇಕು. ಈ ಭಾಗದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಈ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದೇವೆ ಎಂದು ಹೇಳಿದರು. ಬೆಳಗಾವಿ ನಮ್ಮ ಅವಿಭಾಜ್ಯ ಅಂಗ. ಮಹಾಜನ್ ವರದಿ ಅಂತಿಮ ಎಂದು ನಾವೆಲ್ಲ ಒಪ್ಪಿಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿಪ್ಪಾಣಿ, ಖಾನಾಪುರ, ಬೆಳಗಾವಿ ನಮಗೆ ಸೇರಬೇಕೆಂದು ಹುಚ್ಚು ಹೇಳಿಕೆ ನೀಡಿದ್ದಾರೆ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ನಾವು ಕೈ ಕಟ್ಟಿ ಕೂರುವುದಿಲ್ಲ. ಪದೇ ಪದೇ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಮಹಾರಾಷ್ಟ್ರ ರಾಜಕಾರಣಿಗಳು ಮಾಡುತ್ತಾರೆ. ಇವರ ವಿರುದ್ಧ ಹೋರಾಟವನ್ನು ನಿರಂತರವಾಗಿ ಮಾಡುತ್ತೇವೆ. ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನ ಆಚರಿಸಿ ನಾಡಿದ್ದು ಬೆಳಗಾವಿ-ಮಹಾರಾಷ್ಟ್ರ ಗಡಿ ಬಂದ್ ಮಾಡುತ್ತೇವೆ ಎಂದು ಹೇಳಿದರು. ಬೆಳಗಾವಿಯಲ್ಲಿ ಕನ್ನಡ ಧ್ವಜ ವಿರೋಧಿಸಿ ಎಂಇಎಸ್ ಶಿವಸೇನೆ ಪ್ರತಿಭಟನೆ ನಡೆಸುತ್ತಿರು ವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಇದರ ಹಿಂದೆ ಮಹಾರಾಷ್ಟ್ರದ ಕುಮ್ಮಕ್ಕಿದೆ. ಎಲ್ಲರೂ ಪಕ್ಷಾತೀತವಾಗಿ ಇದನ್ನು ಖಂಡಿಸಬೇಕು ಎಂದು ಹೇಳಿದರು.

ಸಾ.ರಾ.ಗೋವಿಂದು ಮಾತನಾಡಿ, ಬೆಳಗಾವಿಯಲ್ಲಿ ನಮ್ಮ ಕನ್ನಡದ ಧ್ವಜ ಹಾರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹಾರುತ್ತಿರುವ ಧ್ವಜಕ್ಕೆ ಕಾವಲು ಹಾಕಲಾಗಿರುವುದು ವಿಪರ್ಯಾಸ. ನಮ್ಮ ರಾಜ್ಯದಲ್ಲಿ ಕನ್ನಡ ಧ್ವಜ ಹಾರಿಸುವುದನ್ನು ಬಿಟ್ಟು ಮಹಾರಾಷ್ಟ್ರ ಧ್ವಜ ಹಾರಿಸಲು ಸಾಧ್ಯವೆ? ಎಂಇಎಸ್, ಶಿವಸೇನೆಯವರ ಪುಂಡಾಟವನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕನ್ನಡಪರ ಹೋರಾಟಗಾರರ ಹೋರಾಟವನ್ನು ಹತ್ತಿಕ್ಕುವ ಬದಲು ನಾಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮರಾಠ ಅಭಿವೃದ್ಧಿ ನಿಗಮವನ್ನು ಹಿಂಪಡೆಯ ಬೇಕು. ಉದ್ಧವ್ ಠಾಕ್ರೆ ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಇದೇ 30ರಂದು ರೈಲು ಬಂದ್ ಮಾಡುತ್ತೇವೆ ಎಂದು ಹೇಳಿದರು.

Facebook Comments