ಮತ್ತೊಮ್ಮೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ಕೊಟ್ಟ ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಜ.23- ಗಡಿಯಲ್ಲಿ ಕಿಡಿಗೇಡಿ ಕೃತ್ಯ ನಡೆಸುತ್ತಿರುವ ಎಂಇಎಸ್ ಸಂಘಟನೆಯನ್ನು ಹತ್ತಿಕ್ಕಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಕನ್ನಡಪರ ಸಂಘಟನೆಗಳೊಂದಿಗೆ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ವಾಟಾಳ್ ನಾಗರಾಜ್, ನಿರ್ಮಾಪಕ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಕನ್ನಡಿಗರಿಗೆ ದಶಕಗಳಿಂದಲೇ ಅನ್ಯಾಯ ನಡೆಯುತ್ತಿದೆ. ಎಂಇಎಸ್, ಶಿವಸೇನಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಸೇರಿ ಅಲ್ಲಿನ ನಾಯಕರು ಕರ್ನಾಟಕದ ವಿರುದ್ಧ ಸತತ ಚಿತಾವಣೆ ನಡೆಸಿದ್ದರೂ ನಮ್ಮ ರಾಜ್ಯಸರ್ಕಾರ ದಿವ್ಯಮನ ವಹಿಸಿದೆ. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವ ಧೈರ್ಯ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಜಾರಕಿಹೊಳಿ, ಉಮೇಶ ಕತ್ತಿ, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಭಾಕರ್ ಕೋರೆ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೇ ಸೇರಿದಂತೆ ಇಲ್ಲಿನ ರಾಜಕಾರಣಿಗಳು ಕನ್ನಡದ್ರೋಹಿ ಕೆಲಸ ಮಾಡುತ್ತಿದ್ದಾರೆ. ಮರಾಠಿ ಪುಂಡರ ವಿರುದ್ಧ ಇವರು ಹೇಳಿಕೆ ಕೊಡದೆ ಮರಾಠಿಗರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹರಿಹಾಯ್ದರು. ಮುಂದಿನ 15 ದಿನದೊಳಗೆ ಬೆಳಗಾವಿ ಮತ್ತು ರಾಜ್ಯದ ಗಡಿಭಾಗದಲ್ಲಿ ಎಂಇಎಸ್ ಸಂಪೂರ್ಣ ನಿಷೇಧಿಸಬೇಕು.

ಇಲ್ಲದಿದ್ದರೆ ಕರ್ನಾಟಕ ಬಂದ್‍ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು. ಮಹಾನಗರ ಪಾಲಿಕೆ ಎದುರಿಗಿನ ಕನ್ನಡ ಧ್ವಜ ತೆಗೆದರೆ ರಕ್ತಪಾತವಾದೀತು ಎಂದು ಗುಡುಗಿದರು. ಎಂಇಎಸ್ ಮತ್ತು ಮರಾಠಿ ನಾಯಕರ ವಿರುದ್ಧ ನೂರಾರು ಕಾರ್ಯಕರ್ತರು ಘೋಷಣೆ ಕೂಗಿದರು. ನಂತರ ವಾಟಾಳ್ ಮತ್ತು ಸಾ.ರಾ.ಗೋವಿಂದು ಸೇರಿ ಇತರರನ್ನು ಪೊಲೀಸರು ವಶಕ್ಕೆ ಪಡೆದರು.

Facebook Comments