‘ಹಿಂದಿ ದಿವಸ್’ ವಿರೋಧಿಸಿ ಕರಾಳ ದಿನಾಚರಣೆ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಇದೇ 14ರಂದು ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಅಂದು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಕರಾಳ ದಿನಾಚರಣೆ ಆಚರಿಸುವ ಮೂಲಕ ಪ್ರತಿಭಟಿಸುವುದಾಗಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಿಗರಿಗೆ ಕನ್ನಡವೇ ರಾಷ್ಟ್ರೀಯ ಭಾಷೆ. ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುವುದನ್ನು ಕೈ ಬಿಡಬೇಕೆಂದು ಹೇಳಿರುವ ಅವರು, ಈ ಸಂಬಂಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಹಿಂದಿ ದರ್ಬಾರ್‍ನಿಂದ ಕನ್ನಡಕ್ಕೆ ಅಪಾಯವಿದೆ. ಎಚ್ಚೆತ್ತುಗೊಳ್ಳದಿದ್ದರೆ ಕನ್ನಡ ಭಾಷೆ ಅಸ್ಮಿತೆಗೆ ಧಕ್ಕೆಯಾಗಲಿದೆ. ಅದಕ್ಕಾಗಿ ಇದನ್ನು ವಿರೋಧಿಸಿ ಇದೇ 14ರಂದು ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಕೇವಲ ಅಂದು ಮಾತ್ರ ಹೋರಾಟ ಮಾಡುವುದಿಲ್ಲ.

ಹಿಂದಿ ವಿರೋಧಿಸಿ ಹಿಂದೆಯೂ ಹೋರಾಟ ಮಾಡಿದ್ದೇವೆ, ಮುಂದೆಯೂ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಕರ್ನಾಟಕ ಬ್ಯಾಂಕುಗಳು, ರೈಲ್ವೆ, ಅಂಚೆಕಚೇರಿ, ಖಾಸಗಿ ಕಂಪೆನಿ ಹಾಗೂ ಎಲ್ಲಾ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು. ಪರಭಾಷ ಹೇರಿಕೆಯನ್ನು ಕೇವಲ ಕನ್ನಡಪರ ಸಂಘಟನೆಗಳು ವಿರೋಧ ಮಾಡಿದರೆ ಸಾಲದು. ನಾಡಿನ ಎಲ್ಲರೂ ವಿರೋಧಿಸಿ ಕನ್ನಡ ಭಾಷೆಯನ್ನು ಎತ್ತಿಹಿಡಿಯಬೇಕು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ವಿವಿಧ ಪ್ರಾಧಿಕಾರಿಗಳು ಈ ಕುರಿತು ಯಾವುದೇ ಹೋರಾಟ ಮಾಡದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Facebook Comments